Home ರಾಜಕೀಯ ಸಮಾಚಾರ ಬೆಳ್ತಂಗಡಿ; ಕನಿಷ್ಟ ಕೂಲಿಗಾಗಿ ಸಿ.ಐ.ಟಿ.ಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ

ಬೆಳ್ತಂಗಡಿ; ಕನಿಷ್ಟ ಕೂಲಿಗಾಗಿ ಸಿ.ಐ.ಟಿ.ಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ

0

ಬೆಳ್ತಂಗಡಿ; ಹಲವು ಜನರ ತ್ಯಾಗಮಯ ಹೋರಾಟದಿಂದ ಪಡೆದ ಕಾನೂನು ಸವಲತ್ತುಗಳನ್ನು ಮತ್ತು ಕನಿಷ್ಟ ವೇತನವನ್ನು ಇಲ್ಲವಾಗಿಸಲು ಮಾಲಕರು ನಡೆಸುವ ಶಡ್ಯಂತರಗಳ ವಿರುದ್ದ ಹೋರಾಟ ನಡೆಸಿ ನ್ಯಾಯ ಪಡೆಯಲು ಕಾರ್ಮಿಕರು ಸಿದ್ದರಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಬೀಡಿಕಾರ್ಮಿಕರ ಫೆಡರೇಶನ್ ಅಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿ ಹೇಳಿದರು.
ಬೀಡಿ ಕಾರ್ಮಿಕರ ವೇತನ ಬಾಕಿ ಮತ್ತು ಕನಿಷ್ಟ ವೇತನ ಜಾರಿ ಮಾಡದ ಬೀಡಿ ಮಾಲಕರ ಕಾರ್ಮಿಕ ವಿರೋದಿ ದೋರಣೆ ಖಂಡಿಸಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಜೆಪಿ ಬೀಡಿ ಕಂಪೆನಿ ಎದುರು ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. 2018 ರಲ್ಲಿ ತ್ರಿಪಕ್ಷೀಯ ಸಮಿತಿ ಸರ್ವಾನುಮತದಿಂದ ಅಂಗೀಕರಿಸಿದ ವೇತನ ನೀಡದೆ ವಂಚಿಸಿದ ಬೀಡಿ ಮಾಲಕರು ಇಂದಿನವರೆಗೂ ಆ ಬಾಕಿ ವೇತನವನ್ನು ಕೊಡದೆ ಸತಾಯಿಸುತ್ತಿದ್ದಾರೆ. ಸರಕಾರವೂ ಶೋಷಕ ಬೀಡಿ ಮಾಲಕರ ಪರವಾಗಿ ನಿಂತಿದ್ದಲ್ಲದೆ ಮತ್ತೆ ಬೀಡಿ ಕಾರ್ಮಿಕರ ಕನಿಷ್ಟ ವೇತನವನ್ನು ಪ್ರತಿ 1000 ಬೀಡಿಗೆ ಇದ್ದ ರೂ 315 ವೇತನವನ್ನು ರೂ 270 ಕ್ಕೆ ಇಳಿಸಿ ವೇತನ ಹಿಮ್ಮುಖಗೊಳಿಸಿ ಆದೇಶ ಮಾಡಿತು. ಆದರೆ ಬೀಡಿ ಮಾಲಕರು ಈ ಹಿಮ್ಮುಖವಾಗಿ ನಿರ್ಧಾರ ಮಾಡಿದ ವೇತನವನ್ನೂ ನೀಡದೆ ಸತಾಯಿಸುವುದರ ವಿರುದ್ದ ಈ ಹೋರಾಟ ನಡೆಸುವ ಅನಿವಾರ್ಯತೆ ಮತ್ತು ಹೋರಾಡಿ ಗೆಲ್ಲಬೇಕಿದೆ ಎಂದರು.


ಬಳಿಕ ಮಾತಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಅವರು ಕಳೆದ 10 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ತಾವು ದುಡಿದ ವೇತನ ನೀಡದೆ ಕಾನೂ ಉಲ್ಲಂಘಿಸಿ ಕೈಗಾರಿಕೆ ನಡೆಸುತ್ತಿರುವ ಬೀಡಿ ಮಾಲಕರ ಪರ ಎರಡೂ ರಾಜಕೀಯ ಪಕ್ಷಗಳು ನಿಂತಿವೆ ಎಂಬ ಸತ್ಯ ನಮಗೆ ಅರ್ಥವಾಗಬೇಕು ಎಂದರು. ದುಡಿಯುವ ಜನರ ಅಭದ್ರತೆಗೆ, ಶೋಷಣೆಗೆ, ದುಡಿದ ವೇತನ ಸಿಗದೆ ಪರಿತಪಿಸುವವರಿಗೆ, ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ನೀಡಲು ರಾಜ್ಯದ 224 ಶಾಸಕರು ಹಾಗೂ ಅವರು ಗೆದ್ದು ಬಂದ ರಾಜಕೀಯ ಪಕ್ಷಗಳು ಸಿದ್ದರಿಲ್ಲ ಎಂಬುದು ನಮ್ಮ ದುಡಿದ ವೇತನ ಕೊಡಿಸದ ರಾಜಕೀಯದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಕೆಲಸ ಬಿಟ್ಟ ಕಾರ್ಮಿಕರಿಗೆ ಗ್ರಾಚ್ಯುವಿಟಿ ನೀಡದೆ, ದುಡಿದ ವೇತನ ನೀಡದೆ ಕಾರ್ಮಿಕರನ್ನು ಲೂಟಿ ಮಾಡುವ ಈ ಮಾಲಕರ ಮೇಲೆ ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇನ್ನು ಅತ್ಯಾಚಾರ, ದೌರ್ಜನ್ಯ, ಕೊಲೆಗಳಿಗೆ ನ್ಯಾಯ ಕೊಡಿಸಿತೆ ಎಂದು ಅನುಮಾನ ವ್ಯಕ್ತ ಪಡಿಸಿದರು.


ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷೆಯಾದ ಈಶ್ವರಿ ಶಂಕರ್ ಮಾತನಾಡಿ ಹೋರಟದೊಂದಿಗೆ ಎಲ್ಲ ಕಾರ್ಮಿಕರು ಕೈಜೋಡಿಸುವ ಅಗತ್ಯವಿದೆ ಎಂದರು.
ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿ ವಂದಿಸಿದರು. ಬೀಡಿ ಕಾರ್ಮಿಕರ ವಂಚನೆಯ ವಿರುದ್ದ ಸಮುದಾಯ ತಂಡ ಹಾಡು ರಚಿಸಿ ಹಾಡಿದರು. ಹೋರಾಟದ ನೇತೃತ್ವದಲ್ಲಿ ಸಿಪಿಐಎಂ ಮುಖಂಡರುಗಳಾದ ಶ್ಯಾಮರಾಜ್ ಪಟ್ರಮೆ, ಧನಂಜಯ ಪಟ್ರಮೆ, ಲೋಕೇಶ್ ಕುದ್ಯಾಡಿ, ಜಯರಾಮ ಮಯ್ಯ, ಕಾರ್ಮಿಕ ಮುಖಂಡರುಗಳಾದ ಪುಷ್ಪ, ಅಪ್ಪಿ, ಕುಮಾರಿ, ಪ್ರೇಮಲತ ಶಿಬಾಜೆ, ರಾಮಕ್ಕ ಕಳೆಂಜ, ಯಕ್ಷಲ ನಿಡ್ಲೆ, ಡೀಕಯ ಕಡಿರುದ್ಯಾವರ, ಕುಸುಮ ಪಡ್ಪು, ಮೋನಮ್ಮ ಕುಕ್ಕಳ, ಜಯಂತಿ ಮುಂಡಾಜೆ, ಸುನಂದ ಮುಂಡಾಜೆ, ಬೀಡಿ ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಸಿ.ಮಹಮ್ಮದ್, ಯುವ ನಾಯಕರುಗಳಾದ ಅಭಿಷೇಕ್, ಅಶ್ವಿತ, ವಿನುಶರಮಣ ಮೊದಲಾದವರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version