Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳ ಪ್ರಕರಣ    ಸೆ. 26ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪುರಂದರ ಗೌಡ ಹಾಗೂ ತುಕಾರಾಂ ಗೌಡ...

ಧರ್ಮಸ್ಥಳ ಪ್ರಕರಣ    ಸೆ. 26ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಅವರಿಗೆ ಹೈಕೋರ್ಟ್ ಸೂಚನೆ

0

ಬೆಂಗಳೂರು; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ದಾಖಲೆಯನ್ನು ಸೆಪ್ಟೆಂಬರ್ 26ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ತಾವು ಗುರುತಿಸಿರುವ ಜಾಗಗಳಲ್ಲಿ ಸ್ಥಳ ಪರಿಶೀಲನೆ ಹಾಗೂ ಶವಗಳ ಉತ್ಪನನ ನಡೆಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
ಪ್ರಕರಣದ ದೂರು ದಾಖಲಾದಾಗಿನಿಂದ ಈವರೆಗಿನ ಬೆಳವಣಿಗೆಗಳ ಕುರಿತು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರಿಂದ ಮಾಹಿತಿ ಪಡೆದ ನ್ಯಾಯಪೀಠ, ಮೂಲ ದೂರುದಾರನ ಬಳಿ ಇರುವ ಮಾಹಿತಿ ಹೊರತುಪಡಿಸಿ ನಿಮ್ಮ ಬಳಿ ಹೆಚ್ಚಿನ ಮಾಹಿತಿ ಏನಿದೆ ಎಂದು ಅರ್ಜಿದಾರರ ಪರವಾಗಿ ವಿಡಿಯೊ ಕಾನ್ಸರೆನ್ಸ್ ಮೂಲಕ ಹಾಜರಿದ್ದ ಹಿರಿಯ ವಕೀಲ ದೀಪಕ್ ಖೋಸ್ಲಾ ಅವರನ್ನು ಪ್ರಶ್ನಿಸಿತು.

ಅಂತಿಮವಾಗಿ, ಅರ್ಜಿದಾರರ ಬಳಿ ಇರುವ ದಾಖಲೆಯನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿತು.

ಪುರಂದರ ಗೌಡ ಹಾಗೂ ತುಕಾರಾಂ ಗೌಡ ಅವರು ಸಲ್ಲಿಸಿರುವ ಮನವಿ ಪರಿಗಣಿಸಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶಿಸಬೇಕು. ಅರ್ಜಿದಾರರು ತೋರಿಸುವ ಸ್ಥಳಗಳಲ್ಲಿ ಉತ್ಪನನಕ್ಕೆ ಅನುವಾಗುವಂತೆ ಅರ್ಜಿದಾರರಿಗೆ ಜತೆಯಾಗಿ ರಿಜಿಸ್ಟ್ರಾರ್ (ನ್ಯಾಯಾಂಗ) ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಂತಹ ಕೋರ್ಟ್ ಕಮಿಷನರ್ ಒಬ್ಬರನ್ನು ನೇಮಕ ಮಾಡಬೇಕು ಹಾಗೂ ಈ ಕುರಿತ ತತ್ವಪೂರ್ಣವಾದ ವಾಸ್ತವಿಕ ವರದಿಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ಆದೇಶಿಸಬೇಕು. ಇದಲ್ಲದೆ, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಂತ್ಯಸಂಸ್ಕಾರಗಳಿಗೆ ಸಂಬಂಧಿಸಿದಂತೆ ಸಮಗ್ರ ಹಾಗೂ ವಸ್ತುನಿಷ್ಠ ತನಿಖೆ ನಡೆದಿದೆ ಎಂಬುದನ್ನು ಖಾತ್ರಿಪಡಿಸಲು ತನಿಖೆಯ ಪ್ರಗತಿ ವರದಿಯನ್ನು ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್‌ಐಟಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version