
ಬೆಳ್ತಂಗಡಿ; ಗರ್ಡಾಡಿ ಕಥೋಲಿಕ್ ಸಭೆಯ ವತಿಯಿಂದ ವನಮಹೋತ್ಸವ ಹಾಗೂ ಕೃಷಿ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಮಾರಂಭದಲ್ಲಿ ಗರ್ಡಾಡಿ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ. ಸುದೀಪ್ ಸಂತಾನ್ ಗೊನ್ಸಾಲ್ವೀಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ತಮ್ಮ ಸಂದೇಶದಲ್ಲಿ ತಿಳಿಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಬಂದಂತಹ ಮಂಗಳೂರಿನ ಕೃಷಿ ಇಲಾಖೆಯ ಜೋ ಪ್ರದೀಪ್ ಡಿಸೋಜರವರು ಅಡಿಕೆಯ ವಿವಿಧ ತಳಿಗಳು, ಅಡಿಕೆ ಬೆಳೆಯನ್ನು ಬೆಳೆಯಲು ಬೇಕಾದ ಬೀಜದ ಆಯ್ಕೆ, ಬೇಕಾದ ಮಣ್ಣು, ಬೆಳೆಯುವ ರೀತಿ, ಅದಕ್ಕೆ ಬೇಕಾಗುವ ಪೋಷಕಾಂಶಗಳು, ಅದಕ್ಕೆ ಬರುವ ವಿವಿಧ ರೋಗಗಳು ಹಾಗೂ ಔಷಧಿ ಸಿಂಪರಣೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಗರ್ಡಾಡಿ ಕಥೋಲಿಕ್ ಸಭೆಯ ಅಧ್ಯಕ್ಷರಾದ ಆಲ್ವಿನ್ ಮೋನಿಸ್ ಸ್ವಾಗತಿಸಿದರು. ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ಹೆರಾಲ್ಡ್ ಮೋನಿಸ್, ಬೆಳ್ತಂಗಡಿ ಪ್ರಾಂತ್ಯದ ಕಥೋಲಿಕ್ ಸಭೆಯ ಅಧ್ಯಕ್ಷರಾದ ಆಲ್ಬರ್ಟ್ ಸುನಿಲ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಥೋಲಿಕ್ ಸಭೆಯ ಕಾರ್ಯದರ್ಶಿ ಸ್ಟೀವನ್ ಮೋನಿಸ್ ರವರು ಧನ್ಯವಾದವಿತ್ತರು. ಕಥೋಲಿಕ್ ಸಭೆಯ ಸದಸ್ಯರಾದ ಮೆಲ್ವಿನ್ ಮೋನಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಅನಂತರ ಸಾಂಕೇತಿಕವಾಗಿ ಎಲ್ಲರೂ ಜೊತೆಗೂಡಿ ಗಿಡ ನೆಟ್ಟರು, ಎಲ್ಲರಿಗೂ ವಿವಿಧ ರೀತಿಯ ಗಿಡಗಳನ್ನು ಹಂಚಲಾಯಿತು.
ಬೆಳ್ತಂಗಡಿ ಪ್ರಾಂತ್ಯ ಕಥೋಲಿಕ್ ಸಭಾ ಅಧ್ಯಕ್ಷರಿಗೆ ಸನ್ಮಾನ
ಬೆಳ್ತಂಗಡಿ ಪ್ರಾಂತ್ಯದ ಕಥೋಲಿಕ್ ಸಭೆಯ ಅಧ್ಯಕ್ಷರಾಗಿ ಗರ್ಡಾಡಿಯಿಂದ ಆಯ್ಕೆಯಾದ ಆಲ್ಬರ್ಟ್ ಸುನಿಲ್ ಮೋನಿಸ್ ರವರನ್ನು ಚರ್ಚ್ ವತಿಯಿಂದ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ ಸುದೀಪ್ ಸಂತಾನ್ ಗೊನ್ಸಾಲ್ವೀಸ್ ರವರು ಶಾಲು ಹೊದಿಸಿ ಹಾಗೂ ಚರ್ಚ್ ಪಾಲನಾ ಮಂಡಳಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹೂಗುಚ್ಛ ನೀಡಿ ಸನ್ಮಾನಿಸಿದರು.