

ಬೆಳ್ತಂಗಡಿ; ತೆಂಕ ಕಾರಂದೂರು ಕಾಪಿನಡ್ಕದ ಓಡದಕರಿಯ ಎಂಬಲ್ಲಿ ವ್ಯಕ್ತಿಯೊಬ್ಬ ಮನೆಯೊಳಗೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ವ್ಯಕ್ತಿ ಸ್ಥಳೀಯ ನಿವಾಸಿ ಧರ್ಣಪ್ಪ ಕನಡ (64)ಎಂಬಾತನಾಗಿದ್ದಾನೆ. ಈಬಗ್ಗೆ ಈತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ಪತಿ ಧರ್ಣಪ್ಪ ಎಂಬವರು ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದು ಜೂನ್ 17ರಂದು ಸಂಜೆ 4ಗಂಟೆಯ ಸುಮಾರಿಗೆ ವಿಪರೀತ ಶರಾಬು ಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡಿ ಹೆಂಡತಿಯನ್ನು ಮನೆಯಿಂದ ಹೊರಹಾಕಿ ಬೀಗ ಹಾಕಿಕೊಂಡಿದ್ದಾರೆ. ಸಂಜೆಯ ವೇಳೆ ನೋಡಿದಾಗ ಮನೆಯ ಬೆಡ್ ರೂಂನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
