

ಬೆಳ್ತಂಗಡಿ; ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏ.೬ರಂದು ವರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಬೃಹತ್ ಹಕ್ಕೊತ್ತಾಯ ಸಭೆ ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಆರಂಭದಲ್ಲಿ ಅನುಮತಿ ನೀಡಿದ್ದರೂ, ಈ ಸಂಬಂಧ ವಾಟ್ಸಪ್ ಮೂಲಕ ರವಾನೆಯಾಗುತ್ತಿದ್ದ ಸಂದೇಶಗಳ ಗಂಭೀರತೆಯರಿತ ನ್ಯಾಯಪೀಠ ಪ್ರತಿಭಟನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಉದ್ದೇಶಿತ ಪ್ರತಿಭಟನೆಗೆ ಅವಕಾಶ ನೀಡದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಪೀಠ ಆರಂಭದಲ್ಲಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿತ್ತು ಆದರೆ ಉದ್ದೇಶಿತ ಪ್ರತಿಭಟನೆಗೆ ಸಂಬಂಧಿಸಿ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದ್ದ ಕೆಲವು ಸಂದೇಶಗಳು, ಬಹುಸಂಖ್ಯೆಯಲ್ಲಿ ಜನರನ್ನು ಕರೆಸಿಕೊಂಡು ದೇವಸ್ಥಾನ ಪ್ರವೇಶಿಸುವ ಯತ್ನಗಳ ಬಗ್ಗೆ ಸೂಚನೆ ನೀಡಿರುವುದರಿಂದ,ಈ ಘಟನೆಗಳ ಮೂಲಕ ನ್ಯಾಯಾಲಯದ ಹಿಂದಿನ ಆದೇಶ ಉಲ್ಲಂಘನೆ ಆಗಬಹುದು ಮತ್ತು ಸಾರ್ವಜನಿಕ ಶಾಂತಿಗೆ ತೊಂದರೆ ಉಂಟುಮಾಡಬಹುದು ಎಂದು ಧರ್ಮಸ್ಥಳದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ, ಏ.6ರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಆದೇಶ ನೀಡಿದೆ.
ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬಹುದಾಗಿದ್ದು ಈ ಆದೇಶ ಮುಂದಿನ ವಿಚಾರಣೆಯ ತನಕ ಜಾರಿಯಲ್ಲಿರುತ್ತದೆ.ಈ ಪ್ರಕರಣದಲ್ಲಿ ಧರ್ಮಸ್ಥಳದ ಪರವಾಗಿ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಮತ್ತು ವಕೀಲ ರಾಜಶೇಖರ್ ಹಿಳಿಯಾರು ವಾದಿಸಿದ್ದರು.
ಮುಂದಿನ ವಿಚಾರಣೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅಕ್ವಿಟಲ್ ಕಮಿಟಿ ರಚಿಸಲು ರಾಜ್ಯ ಸರಕಾರಕ್ಕೆ ನ್ಯಾಯಾಲಯ ಎರಡೆರಡು ಬಾರಿ ಆದೇಶ ನೀಡಿದ್ದರೂ ರಾಜ್ಯ ಸರಕಾರ ಇಲ್ಲಿಯವರೆಗೂ ಅಕ್ವಿಟಲ್ ಕಮಿಟಿ ರಚಿಸದೆ ಸೌಜನ್ಯಾಳಿಗೆ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ಏ.6ರಂದು ಪೂರ್ವಾಹ್ನ 10 ಗಂಟೆಗೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸಮೀಪ, ಮೃತದೇಹ ಸಿಕ್ಕಿದ ಮಣ್ಣಸಂಕದಿಂದ ಬೃಹತ್ ಜಾಥಾ ಪ್ರಾರಂಭಗೊಂಡು ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ನಡೆಯಲಿದೆ. ತಕ್ಷಣ ಅಕ್ಕಿಟಲ್ ಕಮಿಟಿ ರಚಿಸಿ, ಸೌಜನ್ಯಾಳಿಗೆ ಮೋಸ ಮಾಡಿದ ಪೊಲೀಸರು ಮತ್ತು ವೈದ್ಯಾಧಿಕಾರಿಗಳನ್ನು ತನಿಖೆ ನಡೆಸಲು ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಲು ನಿರ್ಧರಿಸಲಾಗಿತ್ತು.
