Home ಸ್ಥಳೀಯ ಸಮಾಚಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಅವಕಾಶ ನೀಡಬೇಕು; ಜಯಾನಂದ‌ ಪಿಲಿಕಲ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಅವಕಾಶ ನೀಡಬೇಕು; ಜಯಾನಂದ‌ ಪಿಲಿಕಲ ಒತ್ತಾಯ

23
0

ಬೆಳ್ತಂಗಡಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪ್ರಸಿದ್ಧ ಕ್ಷೇತ್ರ ವಾಗಿ ನಾಡಿನಲ್ಲೆಡೆ ಚಿರಪರಿಚಿತವಾಗಿದೆ. ನಾಗದೇವರ ಮೂಲ ಆರಾಧನಾ ಸ್ಥಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳಾಗಿರುವ ಮಲೆಕುಡಿಯ ಸಮುದಾಯಕ್ಕೆ ಸೇರಿರುವ ದೇವಸ್ಥಾನವೆಂಬ ಹಿನ್ನೆಲೆಯನ್ನು ಹೊಂದಿದೆ. ಮಲೆಕುಡಿಯ ವಂಶಸ್ಥರಾದ ಕುಕ್ಕೆ ಮತ್ತು ಲಿಂಗ ಅನ್ನುವ ಇಬ್ಬರು ದೈವೀ ಪುರುಷರು ಶ್ರೀ ಕ್ಷೇತ್ರದ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಕಾಲ ನಂತರದಲ್ಲಿ ದೇವಸ್ಥಾನವು ಸರಕಾರದ ಆಡಳಿತಕ್ಕೆ ಒಳಪಟ್ಟು ಉತ್ತಮ ರೀತಿಯಲ್ಲಿ ನಿರ್ವಹಣೆಗೊಂಡು ಮುನ್ನಡೆಯುತ್ತಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ಸಂಬಂಧ ಇರುವುದನ್ನು ನಾವು ಕಾಣಬಹುದು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಪ್ರತಿ ಸಂದರ್ಭದಲ್ಲಿ ಮಲೆಕುಡಿಯ ಸಮುದಾಯದ ಒಬ್ಬರಿಗಾದರೂ ಅವಕಾಶ ನೀಡುವುದು ನಿರಂತರವಾಗಿ ನಡೆದು ಬಂದಿದ್ದು ಈ ಬಾರಿ ಸಮಿತಿಯಲ್ಲಿ ಮಲೆಕುಡಿಯ ಸಮುದಾಯದವರಿಗೆ ಅವಕಾಶವಿಲ್ಲ ಎಂಬ ಮಾಹಿತಿಗಳು ಹೊರ ಬರುತ್ತಿದ್ದು ಇದು ಸಮುದಾಯದ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು ಇದನ್ನು ಪರಿಹರಿಸಿ ಸಮಿತಿಯಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯಕ್ಕೆ ಅವಕಾಶ ಕಲ್ಪಿಸವೇಕು ಎಂದು ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಸ್.ಟಿ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ ಪತ್ರಿಕಾಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಶ್ರೀ ಕ್ಷೇತ್ರದ ದೇವರ ಪರಿಚಾರಕ ವೃತ್ತಿಯಿಂದ ಉತ್ಸವ ಕಾರ್ಯಗಳು, ಸಾಂಗವಾಗಿ ನೆರವೇರಲು ಮಲೆಕುಡಿಯರು ನಾನಾ ರೀತಿಯಲ್ಲಿ ಶ್ರಮಪಡುತ್ತಾರೆ. ದೈವದ ನೇಮೋತ್ಸವ ಕಾರ್ಯಕ್ರಮದಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದೆ.

ಅಷ್ಟಮಿಯಂದು ಶ್ರೀ ದೇವಳದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವವನ್ನು ನೆರವೇರಿಸುವುದೇ ಮಲೆಕುಡಿಯ ಸಮುದಾಯದವರು. ಮುಖ್ಯವಾಗಿ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ದೇವರ ಬ್ರಹ್ಮ ರಥವನ್ನು ಕಟ್ಟುವ ಕಾರ್ಯವನ್ನು ಮಲೆ ಕುಡಿಯರೆ ನಿರ್ವಹಿಸುತ್ತಿದ್ದು ಈ ಕುರಿತಾದ ಕಟ್ಟು ಕಟ್ಟಳೆಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿರುತ್ತಾರೆ. ಧಾರ್ಮಿಕ ವಿಧಿ ವಿಧಾನವಾದ ಅಷ್ಟಮಂಗಳದಲ್ಲಿಯೂ ಈ ಸಂಬಂಧವಾಗಿ ಅನೇಕ ವಿಚಾರಗಳು ಪ್ರಸ್ತಾಪವಾಗಿದ್ದು ಮೂಲ ನಿವಾಸಿಗಳಾದ ಮಲೆಕುಡಿಯರು ಮತ್ತು ದೇವಸ್ಥಾನಕ್ಕೆ ಪರಂಪರಾಗತವಾಗಿ ಇರುವ ಭಾಂದವ್ಯವನ್ನು ತಿಳಿಸುತ್ತದೆ.

ಈ ಎಲ್ಲಾ ಕಾರಣದ ಹಿನ್ನೆಲೆಯಿಂದಾಗಿ ಇದುವರೆಗಿನ ಕಾರ್ಯ ನಿರ್ವಹಿಸುತ್ತಿದ್ದ ಸಮಿತಿಗಳಲ್ಲಿ ಮಲೆ ಕುಡಿಯರಿಗೆ ಕನಿಷ್ಠ ಒಂದು ಸದಸ್ಯತ್ವ ಸ್ಥಾನವನ್ನು ನೀಡಲಾಗುತ್ತಿತ್ತು. ಆದರೆ ಈ ಸಾಲಿನ ಹೊಸ ಸಮಿತಿಯಲ್ಲಿ ಸಮುದಾಯದ ಮಂದಿಯ ಹೆಸರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿಯಿದ್ದು, ಸರ್ಕಾರ ಮತ್ತೊಮ್ಮೆ ಮರು ಪರಿಶೀಲನೆ ಮಾಡಿ ಮಲೆಕುಡಿಯರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಅಂತಿಮಗೊಳಿಸಿ ವ್ಯವಸ್ಥಾಪನ ಸಮಿತಿಯನ್ನು ಘೋಷಣೆ ಮಾಡಬೇಕು ಎಂದು ಜಯಾನಂದ ಪಿಲಿಕಲ ಅವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here