
ಬೆಳ್ತಂಗಡಿ; ಕಳೆದ ವಾರವಷ್ಟೇ ನಿಡಿಗಲ್ ಹಳೇಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ 2000ರೂ. ದಂಡ ವಿಧಿಸಿದ ಘಟನೆ ಮುಂಡಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತೆ ಅಂಥದ್ದೇ ಘಟನೆ ಮತ್ತೆ ಮರುಕಳಿಸಿದೆ.
ಮಂಗಳವಾರ ಬೆಳಗಿನ ಹೊತ್ತು ನಿಡಿಗಲ್ ಹೊಸ ಸೇತುವೆಯ ಬಳಿ ತ್ಯಾಜ್ಯ ಕಂಡುಬಂದಿದ್ದು ಯಾರೋ ನದಿಯನ್ನು ಗುರಿಯಾಗಿಸಿ ಎಸೆದ ತ್ಯಾಜ್ಯವು ಸೇತುವೆಯ ಮೇಲೆ ಬಿದ್ದಿರುವುದು ಕಂಡುಬಂದಿದೆ.
ಈ ಕಸದ ಚೀಲ, ಹಾಗೂ ಸೇತುವೆಯ ಇಕ್ಕೆಲಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅದು ಉಜಿರೆಯ ವ್ಯಕ್ತಿಗಳದ್ದೆoದು ತಿಳಿದುಬಂತು. ಕೂಡಲೇ ಅವರನ್ನು ದೂರವಾಣಿ ಮೂಲಕ ಸ್ಥಳಕ್ಕೆ ಕರೆಸಿ ಅವರಿಂದಲೇ ಕಸ ವಿಲೇವಾರಿ ಮಾಡಿಸಿ ರೂಪಾಯಿ 1000ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ತಿಳಿಸಿದ್ದಾರೆ.
ನಿಡಿಗಲ್ ಸೇತುವೆಗಳಲ್ಲಿ ಕಸ ಹಾಕುವುದು ಮಾಮೂಲಾಗಿತ್ತು. ಹಾಗೂ ಈ ಕಸ ನದಿಯನ್ನು ಸೇರಿ ನೀರು ಮಲೀನವಾಗುತ್ತಿತ್ತು. ಈ ನೀರು ಹಲವಾರು ಕೃಷಿ ಜಮೀನಿಗೆ ಹಾಗೂ ಸ್ಥಳೀಯರಿಗೆ ಪ್ರಮುಖ ಆಶ್ರಯವಾಗಿದೆ. ಇದೀಗ ಪಂಚಾಯಿತಿ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ.