Home ಅಪರಾಧ ಲೋಕ ನೆರಿಯ; ಸುಂದರ ಮಲೆಕುಡಿಯ ಕೈ ಕಡಿದ ಪ್ರಕರಣ; ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ನೆರಿಯ; ಸುಂದರ ಮಲೆಕುಡಿಯ ಕೈ ಕಡಿದ ಪ್ರಕರಣ; ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

0

ಬೆಳ್ತಂಗಡಿ: ಸುಮಾರು ಹತ್ತು ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗೋಪಾಲ ಗೌಡ ಯಾನೆ ಗೋಪಾಲಕೃಷ್ಣ ಗೌಡ, ಮಂಗಳೂರಿನ ಕುಡುಪು ಪಾಲ್ಡನೆಯ ಎ.ದಮಯಂತಿ, ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಸಂತ ಗೌಡ ಯಾನೆ ರಾಮಣ್ಣ ಗೌಡ, ನೆರಿಯ ಗ್ರಾಮದ ಪುಷ್ಪಲತಾ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.
ಆರೋಪಿ ಗೋಪಾಲ ಗೌಡನಿಗೆ 3 ವರ್ಷಗಳ ಕಾಲ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ ಹಾಗೂ ದಂಡ ತೆರಲು ವಿಫಲವಾದಲ್ಲಿ ಮತ್ತೆ 6 ತಿಂಗಳ ಸಾದಾ ಸಜೆ, ಆರೋಪಿಗಳಾದ ದಮಯಂತಿ, ವಸಂತ ಗೌಡ, ಪುಷ್ಪಲತಾರಿಗೆ 2 ವರ್ಷ ಗಳ ಶಿಕ್ಷೆ ಮತ್ತು ತಲಾ 15 ಸಾವಿರ ರೂ. ದಂಡ ಹಾಗೂ ದಂಡ ತರಲು ವಿಫಲವಾದಲ್ಲಿ ಮತ್ತೆ 3 ತಿಂಗಳ ಸಾದಾ ಶಿಕ್ಷೆ ವಿಧಿಸಲಾಗಿದೆ. ಸೆ.506ರ ಅಡಿ ನಾಲ್ಕು ಮಂದಿ ಆರೋಪಿಗಳಿಗೆ 6 ತಿಂಗಳ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ತೀರ್ಪು ನೀಡಿದ್ದಾರೆ. ದಂಡದ ಮೊತ್ತ 1.45 ಲಕ್ಷ ರೂ.ವನ್ನು ಗಾಯಾಳು ಸುಂದರ ಮಲೆಕುಡಿಯ ಅವರಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.


*ಘಟನೆಯ ವಿವರ*

2015ರ ಜು. 26ರಂದು ಸಂಜೆ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿನ ಜಮೀನಿನಲ್ಲಿದ್ದ ಕಾಡನ್ನು ರೇವತಿ ಮತ್ತು ಬಿ.ಎ. ಸುಂದರ ಮಲೆಕುಡಿಯ ಅವರು ಮಕ್ಕಳಾದ ಪೂರ್ಣೇಶ್ ಮತ್ತು ಪೂರ್ಣಿಮಾರೊಂದಿಗೆ ಕಡಿಯುತ್ತಿ ದ್ದಾಗ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ಕಳ ಕತ್ತರಿಸುವ ಯಂತ್ರದಿಂದ ಸುಂದರ ಮಲೆಕುಡಿಯರ ಕೈಬೆರಳುಗಳನ್ನು ತುಂಡರಿಸಿ ಗಂಭೀರ ಗಾಯಗೊಳಿಸಿದ್ದರು. ಬಳಿಕ ಪರಾರಿಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.


ಸುಂದರ ಮಲೆಕುಡಿಯ ಅವರ ಕೈ ಕಡಿದ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ನೆರಿಯದಲ್ಲಿ ಬೆಳ್ತಂಗಡಿ ಯಲ್ಲಿ ಹಾಗೂ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟವೇ ನಡೆದಿತ್ತು. ಬೆಂಗಳೂರು ದೆಹಲಿಯಲ್ಲಿಯೂ ಘಟನೆ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಸಿಪಿಐಎಂ ಪಕ್ಷ ಅಂದು ನ್ಯಾಯಕ್ಕಾಗಿ ನಡೆದ ಹೋರಾಟದ ನೇತೃತ್ವ ವಹಿಸಿತ್ತು. ಅಂದು ಪಕ್ಷದ ಮುಖಂಡರುಗಳಾದ ಬಿ.ಎಂ ಭಟ್, ಶೇಖರ ಲಾಯಿಲ,‌ಶಿವಕುಮಾರ್, ಆದಿವಾಸಿ ಸಮುದಾಯದ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ಸೇರಿದಂತೆ ತಾಲೂಕಿನ ನ್ಯಾಯಪರ ಹೋರಟಗಾರರೆಲ್ಲರೂ ಅಂದು ಒಟ್ಟಾಗಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು.

ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಯಾಗಿದ್ದ ಸೀತಾರಾಮ್ ಯೆಚೂರಿ ಅವರು ಮಂಗಳೂರಿಗೆ ಆಗಮಿಸಿ ಸುಂದರ ಮಲೆಕುಡಿಯ ಅವರನ್ನು ಭೇಟಿಯಾಗಿ ದೈರ್ಯ ತುಂಬಿದ್ದರು. ಹಾಗೂ ನ್ಯಾಯಕ್ಕಾಗಿನ ಹೋರಾಟದ ನೇತೃತ್ವ ವಹಿಸಿದ್ದರು.  ಹೋರಾಟದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಗೋಪಾಲಗೌಡ ಹಾಗೂ ಇತರ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ಪೊಲೀಸರು ಸಲ್ಲಿಸಿದ ದೋಷಾರೋಪಣೆ ಪಟ್ಟಿಯನ್ನು ಸ್ವೀಕರಿಸಿದ ನ್ಯಾಯಾಲಯ ಆರೋಪಿಗಳ ವಿರುದ್ದ ಆರೋಗಳು ಸಾಬೀತಾಗಿರುವ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version