

ಬೆಳ್ತಂಗಡಿ; ನಾಡು-ನುಡಿ, ಕಲೆ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಬೆಳ್ತಂಗಡಿಯಲ್ಲಿ ಹುಟ್ಟಿಕೊಂಡ ಸಂಸ್ಥೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ,
ಸಾಂಸ್ಕೃತಿಕ ಚಿಂತಕ ಸಂಪತ್ ಬಿ. ಸುವರ್ಣ ಅವರ ಸಾರಥ್ಯದ ಈ ಪ್ರತಿಷ್ಠಾನ 14 ವರ್ಷಗಳಿಂದ ನಿರಂತರವಾಗಿ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮನದಲ್ಲಿ ಸ್ಥಾನ ಪಡೆದಿದೆ.
ಸಾಂಸ್ಕೃತಿಕ ಕ್ಷೇತ್ರದ ಮೇರು ಸಾಧಕರನ್ನು ಗುರುತಿಸಿ ಅವರ ಕಲಾಸೇವೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಸುವರ್ಣ ರಂಗ ಸಮ್ಮಾನ್ ಗೌರವ ಪುರಸ್ಕಾರವನ್ನು ನೀಡುತ್ತಿದೆ.
ಪ್ರತಿಷ್ಠಾನದ 15ನೇ ವರ್ಷದ ಸಾಂಸ್ಕೃತಿಕ ಕಲಾ ವೈಭವ ಮತ್ತು ಸುವರ್ಣರಂಗ ಸಮ್ಯಾನ್-2025 ಕಾರ್ಯಕ್ರಮವನ್ನು ಫೆ.19ರಂದು ಬೆಳ್ತಂಗಡಿಯಲ್ಲಿ ನಡೆಯಲಿದೆ.

ಈ ಬಾರಿ ಶಿಲ್ಪಿ ಜಯಚಂದ್ರ ಆಚಾರ್ಯ ನಾಳ, ಕೃತಕ ಕಾಲಿನ ಯಕ್ಷಪಟು ಮನೋಜ್ ವೇಣೂರು ಮತ್ತು ಆರ್. ಸುಭಾಶ್ ಆರ್ವರಿಗೆ ಸುರ್ಣ ರಂಗ ಸನ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಈ ವರೆಗೆ ಕಿರುತೆರೆ ನಿರ್ದೇಶಕ ವಿನು ಬಳಂಜ, ಸಾಂಸ್ಕೃತಿಕ ಸಂಘಟಕ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ| ಮೋಹನ ಆಳ್ವ, ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್, ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್, ರಂಗನಟರಾದ ಬೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸುಂದರ್ ರೈ, ದೇವದಾಸ್ ಕಾಪಿಕಾಡ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರಿಗೆ ಗೌರವ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

2011ರಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖನ ಅವರಿಂದ ಸಂಪತ್ ಸುವರ್ಣ ಉದ್ಘಾಟನೆಗೊಂಡ ಈ ಪ್ರತಿಷ್ಠಾನ ನಿರಂತರವಾಗಿ ಕಲಾರಾಧನೆಯಲ್ಲಿ ತೊಡಗಿಸಿಕೊಂಡಿದೆ. ಸಾಂಸ್ಕೃತಿಕ ಚಟುವಟಿಕೆ ವಿರಳ ಇರುವ ಬೆಳ್ತಂಗಡಿ ಪರಿಸರದಲ್ಲಿ ಕಲಾಪ್ರೇಮಿಗಳ ಮನೆ ತಣಿಸುತ್ತಾ ಬಂದಿದೆ. ವಿಭಿನ್ನ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿರುವ ಪ್ರತಿಷ್ಠಾನ ನೂರಾರು ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಹಲವು ಕಲಾವಿದರನ್ನು ಕಿರುತೆರೆ, ಬೆಳ್ಳಿ ತೆರೆಗೆ ಪರಿಚಯಿಸಿದ ಶ್ರೇಯಸ್ಸು ಪ್ರತಿಷ್ಠಾನಕ್ಕೆ ಸಲ್ಲುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ :
ಕುತ್ಯಾರು ಶ್ರೀ ಸೋಮನಾಥೇಶ್ವರ ದೇವರ ರಥೋತ್ಸವದ ಪ್ರಯುಕ್ತ ಫೆ.19ರಂದು ಸಂಜೆ 6ರಿಂದ ಶ್ರೀಮತಿ ಕಾವ್ಯಶ್ರೀ ಆಜೇರು, ಹೆಬ್ರಿ ಗಣೇಶ್ ಕುಮಾರ್ ಅವರ ಭಾಗವತಿಕೆಯಲ್ಲಿ ಯಕ್ಷಗಾನ ವೈಭವ ನಡೆಯಲಿದೆ. 8 ಗಂಟೆಗೆ ಸುವರ್ಣ ರಂಗ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಅರ್ಪಿಸುವ ಚೈತನ್ಯ ಕಲಾವಿದರು ಬೈಲೂರು ತಂಡದವರು ಅಭಿನಯಿಸುವ ತುಳು ನಾಟಕ “ಅಸ್ಟೆಮಿ” ಫೆ.19ರಂದು ರಾತ್ರಿ ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಶಿಲ್ಪಿ ಜಯಚಂದ್ರ ಆಚಾರ್ಯ ನಾಳ: ಜಯಚಂದ್ರ ಆಚಾರ್ಯರು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ಮೂರ್ತಿ ಕೆತ್ತನೆ ಕಾರ್ಯದಲ್ಲಿ ದೇಶದ ಪ್ರಸಿದ್ದ ಹಿರಿಯ ಶಿಲ್ಪಿಗಳ ತಂಡದೊಂದಿಗೆ ಯುವ ಶಿಲ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ಹಲವಾರು ಪುರಸ್ಕಾರಗಳು ಅವರಿಗೆ ಒಲಿದುಬಂದಿವೆ. ಅವರು ತಾಲೂಕಿನ ಶಿಲ್ಪಿ ನಾಳ ಶ್ಯಾಮರಾಯ ಆಚಾರ್ಯ ಮತ್ತು ಲಲಿತಾ ದಂಪತಿಯ ಪುತ್ರ.
ಮನೋಜ್ ವೇಣೂರು: ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನ ಅಭ್ಯಾಸ
ಕಲಿತುಕೊಂಡ ಮನೋಜ್ ವೇಣೂರು, ಗಿರಿಜಾ ಕಲ್ಯಾಣ ಪ್ರಸಂಗದ ಬೈರಾಗಿ ಪಾತ್ರವನ್ನು ಮಾಡುವುದರ ಮೂಲಕ ರಂಗಪ್ರವೇಶ ಮಾಡಿದರು. 11ನೇ ವರ್ಷದಲ್ಲಿ ಅವರ ಎಡಗಾಲನ್ನು ಕತ್ತರಿಸಿ ನಂತರ ಕೃತಕ ಕಾಲನ್ನು ಜೋಡಿಸಲಾಯಿತು. ಕೃತಕ ಕಾಲಿನೊಂದಿಗೇ ಅನೇಕ ವೇಷಗಳನ್ನು ಮಾಡಿ, ಸುಂಕದಕಟ್ಟೆ, ಬಪ್ಪನಾಡು, ಮಂಗಳಾದೇವಿ, ಕಟೀಲು ಮೇಳಗಳಲ್ಲಿ ವೇಷ ಮಾಡಿರುವ ಹೆಗ್ಗಳಿಕೆ ಮನೋಜ್ ವೇಣೂರು ಅವರದ್ದು.
ಆರ್.ಸುಭಾಶ್ ಆರ್ವ: ವಿವಿಧಧಾರವಾಹಿಗಳಲ್ಲಿ ನಿರ್ದೇಶಕರಾಗಿ
ಕಾರ್ಯನಿರ್ವಹಿಸಿದ ತಾಲೂಕಿನ ಅಳದಂಗಡಿ ಯುವಕ ಸುಭಾಶ್ ಆರ್ವ, ಹಲವು ಪ್ರಶಸ್ತಿಗಳನ್ನು ಪಡೆದ ಹೆಮ್ಮೆಯ ಸಾಧಕ. ತಮ್ಮ ಕಲಾಸೇವೆ ಮೂಲಕ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ವಿನು ಬಳಂಜರವರ ಶಿಷ್ಯ, 2008ರಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡಿ ಪ್ರೀತಿ ಇಲ್ಲದ ಮೇಲೆ, ಜೋಗುಲ, ಜಾನಕಿ, ರಾಘವ ಮತ್ತು ಇತರ ದಾರವಾಹಿಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಇದೀಗ ಮಂಗಳ ಗೌರಿ, ಗೀತಾ, ಕೆಂಡಸಂಪಿಗೆ, ರಂಗನಾಯಕಿ ಇದೀಗ ಕನ್ನಡ ಕಲ್ಲರ್‌ನಲ್ಲಿ ವಧು ದಾರವಾಹಿಯ ನಿರ್ದೇಶಕರಗಿ ಕಾರ್ಯ ನಿರ್ವಹಿಸುದ್ದಾರೆ.
