

ಬೆಳ್ತಂಗಡಿ; ಕೇಂದ್ರದ ಈ ಬಾರಿಯ ಬಜೆಟ್ ರೈತರಿಗೆ, ಕಾರ್ಮಿಕರಿಗೆ ಏನೇನೂ ಸಹಾಯ ನೀಡದ ಹಾಗೂ ಸ್ಕೀಂ ನೌಕರರಾದ ಅಂಗನವಾಡಿ, ಅಕ್ಷರದಾಸೋಹ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡದ ಯುವಜನತೆಗೆ ಉದ್ಯೋಗ ಒದಗಿಸದ ಮತ್ತು ಕರ್ನಾಟಕಕ್ಕೆ ಅನ್ಯಾಯ ಎಸಗಿದ ನಿರಾಸಾದಾಯಕ ಬಜೆಟ್ ಆಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.
ಅವರು ಸೋಮವಾರ ಸಿಪಿಐಎಂ,ಸಿಐಟಿಯು, ಎಐಕೆಎಸ್,ಜೆ.ಎಂ.ಎಸ್ ಡಿ.ವೈ.ಎಫ್.ಐ. ಜಂಟಿಯಾಗಿ ಜನವಿರೋದಿ ಬಜೆಟ್ ವಿರುದ್ದ ನಡೆಸಿದ ಪ್ರತಿಭಟನೆಯನ್ನು ದ್ದೇಶಿಸಿ ಮಾತಾಡುತ್ತಿದ್ದರು. ರೈತರ ಈ ಸಂಕಷ್ಟದ ಸಮಯ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಸ್ವಾಮೀನಾಥನ್ ವರದಿ ಜಾರಿ ಮಾಡುವ ಪ್ರಸ್ತಾಪ ಇಲ್ಲದಿರುವುದು ಮಾತ್ರವಲ್ಲ ಹಣದುಬ್ಬರ ನಡುವೆ ರೈತರಿಗೆ ವಿಂಗಡಿಸಿದ ಅನುದಾದಲ್ಲಿ ಕಡಿತ, ರೈತರನ್ನು ಸಾಲದ ಬಾಧೆಯಿಂದ ಮುಕ್ತಿಗೊಳಿಸಲು ಪ್ರಸ್ತಾಪ ಮಾಡದ ಬಜೆಟ್ ಇದಾಗಿದೆ ಎಂದರು. ಮಹಿಳೆಯರು ದೇಶದಾದ್ಯಂತ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲಕ್ಕೆ ಬಲಿಯಾಗಿ ದೌರ್ಜನ್ಯಕ್ಕೊಳಗಾಗಿರುವಾಗ ಅವರ ರಕ್ಷಣೆಗೆ ಯಾವುದೇ ಪ್ರಸ್ತಾಪ ಬಜೆಟಲ್ಲಿ ಇಲ್ಲದಿರುವುದು ವಿಷಾಧನೀಯ ಎಂದ ಅವರು ಜಿಲ್ಲೆಯ ಅಡಿಕೆ ಬೆಳೆಗಾರರ ರಕ್ಷಣೆಗೆ ಬಾರದ ಮೋದಿ ಸರಕಾರ ಕನಿಷ್ಟ ಅಡಿಕೆ ಆಮದು ನಿಷೇದಿಸುವ ಪ್ರಸ್ತಾಪವನ್ನಾಗಲಿ, ತೊಗರಿಬೇಳೆ ಆಮದು ನಿಷೇದಿಸುವ ಬಗ್ಗೆಯಾಗಲಿ ಮುಂದಾಗಲಿಲ್ಲ ಎಂದು ಟೀಕಿಸಿದರು.

ರಸಗೊಬ್ಬರಗಳ ಸಬ್ಸಿಡಿಯನ್ನು 3,411.30 ಕೋಟಿ ಕಡಿತ ಮಾಡಿ ರಸಗೊಬ್ಬರಗಳ ಬೆಲೆ ಏರಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು. ಕಾಡುಪ್ರಾಣಿಗಳ ಹಾವಳಿ ತಗ್ಗಿಸಲು ಯಾವುದೇ ಅನುದಾನ ಒದಗಿಸಿಲ್ಲ ಎಂದು ಟೀಕಿಸಿದ ಅವರು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಅರಣ್ಯವಾಸಿ ರೈತರಿಗೆ ಭೂಮಿಯ ಹಕ್ಕು ಪತ್ರ ಒದಗಿಸಿ ರಕ್ಷಣೆ ನೀಡಲು ಮುಂದಾಗದಿರುವುದು ನೋಡಿದರೆ ಈ ಬಜೆಟ್ ಸಂಪೂರ್ಣ ರೈತ ವಿರೋದಿ ಬಜೆಟ್ ಆಗಿದೆ ಎಂಬುದು ಸ್ಪಷ್ಟವಾಗಿದೆ ಎಂದರು. ಕಾರ್ಪರೇಟ್ ಕಂಪೆನಿಗಳಿಗೆ ಯಾವುದೇ ತೆರಿಗೆ ಹೆಚ್ಚಳದ ಪ್ರಸ್ತಾಪ ಇಲ್ಲದ ಹಾಗೂ ಅತಿಶ್ರೀಮಂತರ ಪರವಾದ ಈ ಬಜೆಟ್ ಜನಸಾಮಾನ್ಯರು ಉಪಯೋಗಿಸುವ ಅಗತ್ಯವಸ್ತುಗಳ ಮೇಲಿನ ಜಿ.ಎಸ್.ಟಿ ಕಡಿತಗೊಳಿಸಿ ಸಾಮಾಜಿಕ ನ್ಯಾಯವನ್ನೂ ಒದಗಿಸಲಿಲ್ಲ ಎಂದರು. ಆದಿವಾಸಿ, ದಲಿತ, ಮಹಿಳೆಯರ ಅಭಿವೃದ್ದಿಗೆ ಕೂಡಾ ಮುಂದಾಗದ ಅತ್ಯಂತ ಜನವಿರೋದಿ ಬಜೆಟ್ ಇದಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರೂ ದಲಿತ ಹಕ್ಕು ಸಮಿತಿಯ ಮುಖಂಡರೂ ಆದ ಈಶ್ವರಿ ಶಂಕರ್ ಪದ್ಮಂಜ ಅವರು ಮಾತನಾಡಿದರು.

ಸಿಪಿಐಎಂ ತಾಲೂಕು ಸಮಿತಿ ಸದಸ್ಯರಾದ ನೆಬಿಸಾ, ರೈತ ಮುಖಂಡರಾದ ವಿಶ್ವನಾಥ ಶಿಬಾಜೆ, ಸಲಿಮೋನ್, ಜೆಎಂಎಸ್ ತಾಲೂಕು ಅಧ್ಯಕ್ಷರಾದ ಕಿರಣಪ್ರಭಾ, ಕಾರ್ಯದರ್ಶಿ ಕುಮಾರಿ, ಅಪ್ಪಿ, ಕಾರ್ಮಿಕ ಮುಖಮಡರುಗಳಾದ ಪುಷ್ಪಾ, ಅಶ್ವಿತ, ಮೊದಲಾದವರು ಉಪಸ್ಥಿತರಿದ್ದರು. ಮೊದಲಿಗೆ ಸಿಪಿಐಎಂ ತಾಲೂಕು ಸಮಿತಿ ಸದಸ್ಯರಾದ ಜಯಶ್ರೀ ಸ್ವಾಗತಿಸಿ ಕೊನೆಗೆ ರೈತ ಸಂಘದ ತಾಲೂಕು ಅಧ್ಯಕ್ಷರಾದ ಲಕ್ಷ್ಮಣ ಗೌಡ ವಂದಿಸಿದರು.