ಬೆಳ್ತಂಗಡಿ: ಹಲವು ದಶಕಗಳಿಂದ ಭೂಗತರಾಗಿದ್ದ ಆರು ಮಂದಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಬುಧವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಮಂತ್ರಿ ಡಾ.ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶರಣಾಗತರಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ.
ರಾಜ್ಯದ ನಾಲ್ವರು ಹಾಗೂ ಕೇರಳ, ತಮಿಳುನಾಡು ಮೂಲದ ಇಬ್ಬರು ನಕ್ಸಲರು ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆಯವರು ನಡೆಸಿದ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬುಧವಾರ 6 ಮಂದಿ ನಕ್ಸಲರು ಮುಖ್ಯವಾಹಿನಿಗೆ ಮರಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಂದರಿ ಕುತ್ಲೂರು, ರಾಯಚೂರಿನ ಮಾರಪ್ಪಅರೋಲಿ, ತಮಿಳುನಾಡಿನ ಕೆ.ವಸಂತ್, ಕೇರಳದ ಟಿ.ಎನ್.ಜೀಶ ಅವರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯವರು ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆಯ ಸದಸ್ಯರು ಈ ಶರಣಾಗತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿಯ ಬಗ್ಗೆ ಸಿದ್ದತೆ ನಡೆಸಲಾಗಿದ್ದರೂ ಕೊನೆ ಗಳಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಶರಣಾಗತಿಯಾಗಿದ್ದಾರೆ. ಬಿಗಿ ಪೋಲಿಸ್ ಬಂದೋಬಸ್ತಿನಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು , ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರು , ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರೊಂದಿಗೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಎದುರು ಶರಣಾಗತಿಯಾದರು.