ಬೆಳ್ತಂಗಡಿ; ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಕಾನೂನು ಬದ್ದವಾಗಿ ಕಾರ್ಯ ನಿರ್ವಹಿಸುತ್ತಿದೆ. ಟ್ರಸ್ಟ್ ಹಾಗೂ ದೇವಸ್ಥಾನಕ್ಕೆ ಯಾವುದೇ ಸಂಬಂಧವಿಲ್ಲ. ಟ್ರಸ್ಟ್ ನ ಆದಾಯವನ್ನು ಅದರ ರಚನೆಯ ಮೂಲ ಉದ್ದೇಶದಂತೆ ವ್ಯಯ ಮಾಡಲಾಗುತ್ತಿದೆ. ಟ್ರಸ್ಟಿಗೆ ಮೂವರು ವ್ಯಕ್ತಿಗಳು ಟ್ರಸ್ಟ್ ಡೀಡ್ ಬರೆದು ಕೊಟ್ಟ ಜಮೀನನ್ನು ಟ್ರಸ್ಟ್ ಉಪಯೋಗಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಮಾಹಿತಿ ನೀಡಿದರು. ಬೆಳ್ತಂಗಡಿ ಯಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ಸಮಿತಿಯ ಹೆಸರಿನಲ್ಲಿ ಟ್ರಸ್ಟಿನ ಮೇಲೆ ಹಲವಾರು ಆರೋಪಗಳನ್ನು ಮಾಡುತ್ತಿದ್ದು ಅದು ಆಧಾರ ರಹಿತವಾಗಿದೆ ಎಂದು ವಿವರಿಸಿದರು.
2009ರಲ್ಲಿ ಟ್ರಸ್ಟ್ ರಚನೆಯಾಗಿದ್ದು ಟ್ರಸ್ಟ್ ಯಾವುದೇ ಜಾಗವನ್ನು ಕಾನೂನು ಬಾಹಿರವಾಗಿ ಪಡೆದಿಲ್ಲ. ಸದ್ರಿ ಜಮೀನನ್ನು ಪರಭಾರೆ ಮಾಡುತ್ತಿದ್ದ ವ್ಯಕ್ತಿಗಳು ಟ್ರಸ್ಟ್ ಗೆ ಈ ಜಮೀನನ್ನು ಟ್ರಸ್ಟ್ ಡೀಡ್ ಬರೆದು ಕೊಟ್ಟಿದ್ದು ಭೂಮಿಗೆ ಸಂಬಂಧ ಪಟ್ಟ ಬ್ಯಾಂಕ್ ಸಾಲಗಳನ್ನು ಟ್ರಸ್ಟ್ ತೀರಿಸಿದೆ.
ಈ ಜಮೀನನ್ನು ದೇವಸ್ಥಾನದ ಹುಂಡಿಯಿಂದ ತೆಗೆದ ಹಣದಿಂದ ಖರೀದಿಸಿರುವ ಯಾವುದೇ ದಾಖಲೆಗಳು ಇಲ್ಲ ಮುಜರಾಯಿ ಇಲಾಖೆಯ ಹುಂಡಿಯಿಂದ ಅನುಮತಿಯಿಲ್ಲದೆ ಹಣ ತೆಗೆದು ಭೂಮಿ ಖರೀದಿ ಮಾಡಿದರೆ ಅದು ಕಾನೂನು ಬಾಹಿರವಾಗಿದೆ ಎಂದ ಅವರು ಟ್ರಸ್ಟ್ ನ ಜಮೀನಿನಲ್ಲಿರುವ ವಾಣಿಜ್ಯ ಮಳಿಗೆಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಭಕ್ತರಿಂದ ದಾನಿಗಳಿಂದ ಅಥವಾ ದೇವಳದ ನಿಧಿಯಿಂದ ಹಣ ಸಂಗ್ರಹ ಮಾಡಿಲ್ಲ. ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಅಡಮಾನ ಸಾಲ ಮಾಡಿದ್ದು ಈ ಸಾಲಗಳನ್ನು ಟ್ರಸ್ಟ್ ವತಿಯಿಂದಲೇ ತೀರಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ದೇವಸ್ಥಾನದ ಅಗತ್ಯಕ್ಕೆಂದು ಭೂಮಿ ಖರೀದಿಸುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಿರ್ಧಾರವಾಗಿತ್ತು, ಆದರೆ ಅದರ ಮುಂದಿನ ವಿಚಾರಗಳು ತಮಗೆ ತಿಳಿದಿಲ್ಲ ಎಂದರು, ಈ ಹಿಂದೆ ದೇವಸ್ಥಾನದಲ್ಲಿ ನಡೆದ ಗಂಟೆ ಹಗರಣದಲ್ಲಿ ಅವ್ಯವಹಾರವಾಗಿರುವ ಬಗ್ಗೆ ತನಿಖೆ ನಡೆಸಿದ ಸಹಾಯಕ ಆಯುಕ್ತರು ಅವ್ಯವಹಾರವಾಗಿರುವುದನ್ನು ಖಚಿತ ಪಡಿಸಿದ್ದಾರೆ, ಪ್ರಕರಣದಲ್ಲಿ ಅಂದಿನ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ಹರಿಶ್ಚಂದ್ರ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದರು. ಟ್ರಸ್ಟ್ ವತಿಯಿಂದ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಭಟ್, ಕುಶಾಲಪ್ಪಗೌಡ,ಸುಬ್ರಮಣ್ಯ ಭಟ್ ಅಗರ್ತ,
ಡಾ ಎಮ್ ಎಮ್ ದಯಾಕರ್, , ಬಾಲಕೃಷ್ಣ , ದರ್ಣಪ್ಪ, ಪುರಂದರ, ಪ್ರಭಾಕರ ಹೆರಾಜೆ ಹಾಗೂ ಇತರರು ಇದ್ದರು.
Home ಸ್ಥಳೀಯ ಸಮಾಚಾರ ಸೌತಡ್ಕ ದೇವಸ್ಥಾನಕ್ಕೂ ಶ್ರೀ ಮಹಾಗಣಪತಿ ಸೇವಾ ಟ್ರಸ್ಟಿಗೂ ಸಂಬಂಧವಿಲ್ಲ; ಟ್ರಸ್ಟ್ ಕಾನೂನು ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ ಅಧ್ಯಕ್ಷರಿಂದ...