ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ದಂಪತಿಗಳ ಮೃತದೇಹ ಪತ್ತೆಯಾದ ಘಟನೆ ಭಾನುವಾರದಂದು ನಡೆದಿದೆ. ಚಿಂತಾಮಣಿಯಿಂದ ಕಾಣೆಯಾಗಿದ್ದ ದಂಪತಿಗಳ ಮೃತದೇಹ ಇದಾಗಿದೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೊಲೆ ಪವರ್ ಪ್ರಾಜೆಕ್ಟ್ ಬಳಿ ಭಾನುವಾರ ಮಧ್ಯಾಹ್ನ ಮೃತದೇಹಗಳು ಪತ್ತೆಯಾಗಿದೆ.
ಮೃತ ದಂಪತಿಗಳನ್ನು ಚಿಂತಾಮಣಿ ತಾಲೂಕಿನ ಮದ್ದಿರೆಡ್ಡಿ (61) ಈಶ್ವರಮ್ಮ (52) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 31 ರಂದು ದಂಪತಿಗಳು ಮನೆಯಿಂದ ನಾಪತ್ತೆಯಾಗಿದ್ದು. ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದಾರೆ. ಇವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಲ್ಲಿ ಶೌರ್ಯ ತಂಡ ಹಾಗೂ ಪೊಲೀಸರ ಸಹಕಾರದಲ್ಲಿ ನೇತ್ರಾವತಿ ಸ್ನಾನಘಟ್ಟ ಸೇರಿದಂತೆ ನದಿಯಲ್ಲಿ ಹುಡುಕಾಡಿದಾಗ ದೊಂಡೋಲೆ ಬಳಿಯ ಪವರ್ ಪ್ರಾಜೆಕ್ಟ್ ನ ಅಣೆಕಟ್ಟಿನಲ್ಲಿ ಶವಗಳು ಸಿಲುಕಿಕೊಂಡಿದ್ದು ಕಂಡು ಬಂದಿದೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇವರು ನವೆಂಬರ್ 1ರಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.