Home ರಾಜಕೀಯ ಸಮಾಚಾರ ವಿಧಾನ ಪರಿಷತ್ ಚುನಾವಣೆ; ಎಸ್. ರಾಜು ಪೂಜಾರಿ ಅವರಿಗೆ ಕಾಂಗ್ರೆಸ್ ಟಿಕೇಟ್, ಇಂದು ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್ ಚುನಾವಣೆ; ಎಸ್. ರಾಜು ಪೂಜಾರಿ ಅವರಿಗೆ ಕಾಂಗ್ರೆಸ್ ಟಿಕೇಟ್, ಇಂದು ನಾಮಪತ್ರ ಸಲ್ಲಿಕೆ

50
0

ಬೆಳ್ತಂಗಡಿ; ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಬೈಂದೂರಿನ ಎಸ್‌.ರಾಜು ಪೂಜಾರಿ ಅವರು ರಾಜ್ಯ ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಪ್ರಾದಿಕಾರ ಕ್ಷೇತ್ರಕ್ಕೆ ಅ.21ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
58 ವರ್ಷ ಪ್ರಾಯದ ಬಿ.ಕಾಂ ಪದವೀಧರ ರಾಜು ಪೂಜಾರಿ ಅವರು 1987ರಲ್ಲಿ ಎನ್‌ಎಸ್‌ಯುಐನ ಪದಾಧಿಕಾರಿ ಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದು, ಕಾಂಗ್ರೆಸ್‌ನ ವಿವಿಧ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಬಳಿಕ ಸದ್ಯ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.
ಬೈಂದೂರು ತಾಲೂಕು ಮರವಂತೆಯ ಎಸ್.ರಾಜು ಪೂಜಾರಿ ಅವರು ವಿಧಾನ ಪರಿಷತ್ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಅ.3ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಕ್ಷದ ಮುಖಂಡರುಗಳು ಒಟ್ಟಾಗಿ ಸೇರಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.

ರಾಜು ಪೂಜಾರಿ ಪರಿಚಯ:


1966ರಲ್ಲಿ ಜನಿಸಿದ ರಾಜು ಪೂಜಾರಿ ಬಿ.ಕಾಂ ಪದವೀಧರರು. ಕೃಷಿಕರೂ, ವ್ಯಾಪಾರಿಗಳೂ ಆಗಿರುವ ಇವರು 1987ರಲ್ಲಿ ಎನ್‌ಎಸ್‌ಯುಐ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. 1990ರಲ್ಲಿ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ, 1995-96ರಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾಗಿದ್ದ ಇವರು 1998ರಿಂದ ಜಿಲ್ಲಾ ಕಾಂಗ್ರೆಸ್‌ ಸದಸ್ಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.
ಮರವಂತೆ ಗ್ರಾಮ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾದ ರಾಜು ಪೂಜಾರಿ, ಬಳಿಕ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿಯೂ ಒಂದು ಅವಧಿಗೆ ಅನುಭವ ಪಡೆದರು. ಬಳಿಕ ಎರಡು ಅವಧಿಗೆ ಉಡುಪಿ ಜಿಲ್ಲಾ ಪಂಚಾಯತ್‌ನ ಸದಸ್ಯರಾಗಿ ಆಯ್ಕೆಯಾದ ಇವರು ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು
ಇದರೊಂದಿಗೆ ಜಿಲ್ಲಾ ಪಂಚಾಯತ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸಮಿತಿಗಳಲ್ಲೂ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕಾರಣದೊಂದಿಗೆ ಸಹಕಾರಿ ಕ್ಷೇತ್ರದಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ, ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ನಿ. ಬೈಂದೂರು ಇವುಗಳ ಅಧ್ಯಕ್ಷರಾಗಿ ಕುಂದಾಪುರ ತಾಲೂಕು ಸಹಕಾರಿ ಯೂನಿಯನ್, ಕುಂದಾಪುರ ತಾಲೂಕು ಆರೋಗ್ಯ ಸಹಕಾರಿ ಸಂಘ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಮಂಗಳೂರು ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿರುವ ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.

LEAVE A REPLY

Please enter your comment!
Please enter your name here