ಬೆಳ್ತಂಗಡಿ: ಸರಕಾರ ಪರಿಶಿಷ್ಟ ಜಾತಿ ಪಂಗಡದ ಗುತ್ತಿಗೆ ದಾರರಿಗೆ ಶೇ 25ರಷ್ಟು ಮೀಸಲಾತಿಯನ್ನು ನೀಡಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆ ನಡೆಸಬೇಕು ಹಾಗೂ ಈ ಸಮುದಾಯಗಳಿಂದಬಂದಿರುವ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಬೆಳ್ತಂಗಡಿ ಮಿನಿ ವಿಧಾನ ಸೌಧದಲ್ಲಿ ನಡೆದ ಪರಿಶಿಷ್ಟ ಜಾತಿ ಪಂಗಡಗಳ ಮುಂದಾಳುಗಳ ಸಭೆಯಲ್ಲಿ ಮುಖಂಡರುಗಳು ಒತ್ತಾಯಿಸಿದರು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿದ ಮಾಜಿ ಜಿ. ಪಂ ಸದಸ್ಯ ಶೇಖರ ಕುಕ್ಕೇಡಿ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಪರಿಶಿಷ್ಟ ಜಾತಿ ಪಂಗಡದ ಗುತ್ತಿಗೆದಾರರನ್ನು ವಂಚಿಸುವ ಕಾರ್ಯ ನಡೆಯುತ್ತಿದೆ. ಕೆಲವರು ಡಮ್ಮಿ ಗುತ್ತಿಗೆ ದಾರರನ್ನು ಸೃಷ್ಟಿಸಿ ಆ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಸಮಾಜದಿಂದ ಬಂದಿರುವ ಗುತ್ತಿಗೆದಾರರಿಗೆ ಕೆಲಸವೇ ಇಲ್ಲದಾಗಿದೆ. ಗ್ರಾಮ ಪಂಚಾಯತು ಗಳಲ್ಲಿ ಹಾಗೂ ಜಿಲ್ಲಾಪಂಚಾಯತು ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಈ ರೀತಿ ವಂಚನೆ ನಡೆಯುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಸಮಾಜದ ಗುತ್ತಿಗೆ ದಾರರಿಗೆ ನ್ಯಾಯ ಒದಗಿಸಬೇಕು ಎಂದು ಮುಖಂಡರುಳು ಒತ್ತಾಯಿಸಿದರು. ಗುತ್ತಿಗೆದಾರ ಪ್ರಭಾಕರ ತಮಗೆ ಆಗುತ್ತಿರುವ ಅನ್ಯಾಯಗಳನ್ನು ವಿವರಿಸಿದರು. ಈ ಬಗ್ಗೆ ಚರ್ಚೆ ನಡೆದು ಎಲ್ಲ ಗ್ರಾಮ ಪಂಚಾಯತು ಗಳಿಗೂ ಈ ಬಗ್ಗೆ ಸೂಚನೆ ನೀಡುವುದಾಗಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದಲೂ ಈ ಬಗ್ಗೆ ಪರಿಶೀಲನೆ ನಡೆಸು ವುದಾಗಿ ತಿಳಿಸಲಾಯಿತು.

ನಗರದ ರೆಂಕೆದ ಗುತ್ತುವಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯಕ್ಕೆ ಕಾದಿರಿಸಲಾಗಿರುವ ಜಮೀನಿನಲ್ಲಿರುವ ಅಕ್ರಮಗಳನ್ನು ಕೂಡಲೇ ತೆರವು ಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು.
ತಾಲೂಕಿನಲ್ಲಿ ಈಗಾಗಲೇ ಮಂಜೂರಗಿರುವ ಅಂಬೇಡ್ಕರ್ ಭವನಗಳ ನಿರ್ಮಾಣ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು, ಅಂಬೇಡ್ಕರ್ ಭವನಗಳಿಗೆ ಜಾಗ ಮಂಜೂರು ಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಜಾಗ ಮಂಜೂರು ಮಾಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.

ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನೇಮಕಾತಿಯಲ್ಲಿ ಮೀಸಲಾತಿಯನ್ನು ಪಾಲಿಸಲಾಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಕೊಕ್ಕಡದಲ್ಲಿ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಆರೋಪಿಯನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ ಮುಖಂಡರುಗಳು ಈ ಬಗ್ಗೆ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ಮಲವಂತಿಗೆ ಗ್ರಾಮದಲ್ಲಿ ಗ್ರಾಮಪಂಚಾಯತು ಹೋಂಸ್ಟೇಗಳಿಗೆ ಪರವಾನಿಗೆ ನೀಡಿದೆ. ಇದು ಕಾನೂನು ಬಾಹಿರವಾಗಿದೆ. ಮೂಲ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬಿಡದ ಅರಣ್ಯ ಇಲಾಖೆ ಅವರಿಗೆ ಹೇಗೆ ಅನುಮತಿ ನೀಡಿದೆ ಎಂದು ಶೇಖರ ಲಾಯಿಲ ಹಾಗೂ ಜಯಾನಂದ ಪಿಲಿಕಳ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಯಾರಿಗೂ ಇಲಾಖೆಯಿಂದ ನುರಪೇಕ್ಷಣಾ ಪತ್ರ ನೀಡಲಾಗಿಲ್ಲ ಎಲ್ಲ ಹೋಂಸ್ಟೇಗಳಿಗೂ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಆದಿವಾಸಿ ಕುಟುಂಬಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಕಣಿಯೂರಿನಲ್ಲಿರುವ ವಿದ್ಯಾರ್ಥಿ ನಿಲಯವನ್ನು ಮುಚ್ಚಿರುವ ಬಗ್ಗೆ ಸಭೆಯಲ್ಲಿ ಮುಖಂಡರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


hw-remosaic: 0;
touch: (-1.0, -1.0);
modeInfo: ;
sceneMode: Night;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;
ಅಟ್ರಿಂಜೆ ಕೊರಗರ ಕಾಲೊನಿಗೆ ಸೇತವೆ ರಸ್ತೆ ಮಂಜೂರಾಗಿದೆ ಮನೆ ಕಟ್ಟಲು ಜಾಗ ಮಂಜೂರಾಗಿಲ್ಲ ಎಂದು ಅಲ್ಲಿನ ನಿವಾಸಿ ಸವಿತ ಅವರು ಗಮನ ಸೆಳೆದರು. ಇಲ್ಲಿನ ಐದು ಕೊರಗ ಕುಟುಂಬಗಳಿಗೆ ಮನೆ ಮಂಜೂರಾಗಿದೆ ಆದರೆ ಇನ್ನೂ ಸೈಟ್ ಗುರುತಿಸಿ ನೀಡಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಎಲ್ಲಿ ಜಾಗ ಮಂಜೂರಾ ಗಿದೆಯೋ ಅಲ್ಲಿ ಗಡಿ ಗುರುತು ಮಾಡಿಕೊಡುವುದಾಗಿ ತಿಳಿಸಿದರು. ಕಳೆದ ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ ಈಗ ಇರುವಲ್ಲಿಯೇ ಜಾಗ ಗುರುತಿಸಿ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಇದೀಗ ಅಲ್ಲಿಗೆ ಸೇತುವೆ ಹಾಗೂ ರಸ್ತೆಯೂ ಮಂಜೂರಾಗಿದೆ ಇನ್ನು ಬೇರೆ ಕಡೆ ಸೈಟ್ ನೀಡಿದರೆ ಅದನ್ನು ನಿರ್ಮಿಸುವುದಾದರೂ ಯಾಕೆ ಎಂದು ಪ್ರಶ್ನಿಸಿದರು. ಸ್ಥಳ ಪರಿಶೀಲನೆ ನಡೆಸಿ ಸಾಧ್ಯವಾದರೆ ಅಲ್ಲಿಯೇ ಸೈಟ್ ನೀಡಲು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು.
ಸಭೆಯಲ್ಲಿ ಸಮುದಾಯದ ಮುಖಂಡರುಗಳಾದ ಸಂಜೀವ ಆರ್, ಶೇಖರ ಕುಕ್ಕೇಡಿ, ನೇಮಿರಾಜ ಕಿಲ್ಲೂರು, ಬೇಬಿ ಸುವರ್ಣ, ಶೇಖರ ಲಾಯಿಲ, ರಘು ಧರ್ಮಸೇನ, ಜಯಾನಂದ ಪಿಲಿಕಳ, ಪುಷ್ಪರಾಜ್ ಶಿರ್ಲಾಲು, ಹರೀಶ್ ಎಳನೀರು, ಶ್ರೀಧರ ಕಳೆಂಜ, ಹಾಗೂ ಇತರರು ವಿವಿಧ ವಿಚಾರಗಳನ್ನು ಮಂಡಿಸಿದರು.
ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಸಮಾಜಕಲ್ಯಾಣ ಇಲಾಖೆಯ ಹೇಮಚಂದ್ರ, ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ ಮಠ್ ಹಾಗೂ ಇತರ ಅಧಿಕಾರಿಗಳು ಇದ್ದರು.
ಅಂಬೇಡ್ಕರ ಭವನಗಳು ದಲಿತರಿಗೇ ಸಿಗುತ್ತಿಲ;
ದಲಿತ ಸಮುದಾಯದ ಅಭಿವೃದ್ದಿಗೆ ಹಾಗೂ ಅವರ ಸಾಮಾಜಿಕ ಹಾಗೂ ಇತರ ಅಗತ್ಯಗಳಿಗೆ ಉಪಯೋಗವಾ ಗಬೇಕು ಎಂದು ನಿರ್ಮಿಸಲಾಗಿರುವ ಅಂಬೇಡ್ಕರ್ ಭವನಗಳು ದಲಿತರ ಅಗತ್ಯಗಳಿಗೆ ಸಿಗುತ್ತಿಲ್ಲ.ಯಾವುದೇ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಗ್ರಾಮಪಂಚಾಯತು ಅಧ್ಯಕ್ಷರಿಂದ ಆರಂಭಿಸಿ ಸದಸ್ಯರ ಅನುಮತಿಯನ್ನೂ ಪಡೆಯಬೇಕಾದ ಅನಿವಾರ್ಯತೆಯಿದೆ. ಕೆಲವೆಡೆ ಮಾಂಸಾಹಾರ ಮಾಡಬಾರದು ಎಂಬ ಕಂಡೀಷನ್ ಹಾಕುತ್ತಿದ್ದಾರೆ ಇದೆಲ್ಲ ನಿಲ್ಲಬೇಕು. ಗ್ರಾಮ ಪಂಚಾಯತುಗಳು ಅಂಬೇಡ್ಕರ್ ಭವನಗಳನ್ನು ಕಮರ್ಷಿಯಲ್ ಆಗಿ ನೋಡುತ್ತಿದ್ದಾರೆ ಇದು ಸರಿಯಲ್ಲ
ದಲಿತರಿಗಾಗಿ ರಚನೆಯಾಗುವ ಅಂಬೇಡ್ಕರ್ ಭವನಗಳ ನಿರ್ವಹಣೆಯ ಸಮಿತಿಯಲ್ಲಿ ಸಮುದಾಯದವರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸರಕಾರದ ಅನುದಾನ ಪಡೆದು ನಿರ್ಮಾಣವಾಗುವ ಇತರ ಸಮುದಾಯ ಭವನಗಳನ್ನು ಪಂಚಾಯತಿಗೆ ಹಸ್ತಾಂತರಿಸುವ ಅಗತ್ಯವಿಲ್ಲ.ಅದು ಆಯಾ ಸಮುದಾಯದವರ ಕೈಯಲ್ಲಿಯೇ ಇರುತ್ತದೆ, ಆದರೆ ಅಂಬೇಡ್ಕರ್ ಭವನಗಳನ್ನು ಮಾತ್ರ ಗ್ರಾ.ಪಂಗೆ ಹಸ್ತಾಂತರಿಸಲಾಗುತ್ತದೆ. ಇದು ತಾರತಮ್ಯ ನೀತಿಯಲ್ಲವೇ ಎಂದು ಮುಖಂಡರುಗಳು ಪ್ರಶ್ನಿಸಿದರು.
ಈ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂಬೇಡ್ಕರ್ ಭವನಗಳ ನಿರ್ವಹಣೆಗೆ ಸ್ಥಳೀಯ ದಲಿತ ಸಮುದಾಯದ ಮುಖಂಡರುಗಳನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವುದು ಎಂದು ನಿರ್ಧರಿಲಾಯಿತು.