ಉಜಿರೆ: ತ್ಯಾಗ, ಬಲಿದಾನ, ಪ್ರತಿಭಟನೆ ಮೂಲಕ ವಿಶ್ವ ಹಿಂದೂ ಪರಿಷದ್ ವಿಶ್ವದ ಹಿಂದೂಗಳ ಧ್ವನಿ ಹಾಗೂ ಪ್ರತಿನಿಧಿಯಾಗಿದೆ ಎಂದು ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಹೇಳಿದರು.
ಅವರು ಭಾನುವಾರ ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.
ಹಿರಿಯ ಕಾರ್ಯಕರ್ತರ ಶ್ರಮದ ಫಲದಿಂದ ಸಂಘಟನೆ ಶಕ್ತಿಯುತವಾಗಿ ಬೆಳೆದಿದೆ. ದೇಶದಲ್ಲಿ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು. ಧರ್ಮ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಹಿಂದೂ ಸಮಾಜದ ಮೇಲೆ ನಡೆಯುವ ರಾಜಕೀಯ ಮತ್ತು ಸಾಮಾಜಿಕ ದಾಳಿಯನ್ನು ಖಂಡಿಸಬೇಕು. ಜಾತಿ ವಿಚಾರದಲ್ಲಿ ಹಿಂದೂ ಸಮಾಜ ವಿಂಗಡಣೆಯಾ ಗಬಾರದು ಎಂದು ಅವರು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಉತ್ಸವಸಮಿತಿ ಅಧ್ಯಕ್ಷ ಡಾ. ಎಂ. ಎಂ. ದಯಾಕರ್ ಮಾತನಾಡಿ, ನಮ್ಮೊಳಗಿನ ಶಕ್ತಿ ಇನ್ನಷ್ಟು ಬಲಗೊಂಡು ನ್ಯಾಯಮಾರ್ಗದಲ್ಲಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ನವೀನ್ ನೆರಿಯಾ, ಡಾ. ಭಾರತಿ, ಜಿ.ಕೆ., ಎಕ್ಸೆಲ್ ಕಾಲೇಜಿನ ಆಡಳಿತ ನಿರ್ದೇಶಕ ಸುಮಂತ್ ಕುಮಾರ್ ಜೈನ್, ಮೊದಲಾದವರು ಉಪಸ್ಥಿತರಿದ್ದರು.
೬೦ ಮಂದಿ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.
ಸಂಪತ್ ಸುವರ್ಣ ಸ್ವಾಗತಿಸಿದರು. ಮೋಹನ್ ಬೆಳ್ತಂಗಡಿ ಧನ್ಯವಾದವಿತ್ತರು.