Home ಅಪರಾಧ ಲೋಕ ಶಾಸಕ ಹರೀಶ್ ಪೂಂಜರಿಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ; ಮಧ್ಯಂತರ ತಡೆ ಆದೇಶ ವಿಸ್ತರಿಸಿದ ಹೈಕೋರ್ಟ್

ಶಾಸಕ ಹರೀಶ್ ಪೂಂಜರಿಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ; ಮಧ್ಯಂತರ ತಡೆ ಆದೇಶ ವಿಸ್ತರಿಸಿದ ಹೈಕೋರ್ಟ್

0

ಬೆಂಗಳೂರು: ‘ಪರವಾನಿಗೆ ಪಡೆಯದೆ ಅಕ್ರಮ ಗಣಿಗಾರಿಕೆ
ನಡೆಸಿದ ಹಾಗೂ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ವ್ಯಕ್ತಿಯ ಬಂಧನವನ್ನು ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂಬ ಆರೋಪದಡಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಈ ಹಿಂದೆ ನೀಡಲಾಗಿರುವ ಮಧ್ಯಂತರ ತಡೆ ಆದೇಶವನ್ನು ಹೈಕೋರ್ಟ್ ಪುನಃ ವಿಸ್ತರಿಸಿದೆ.

‘ನನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಪೂಂಜ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು, ‘ನೋಟಿಸ್ ನೀಡದೆ ಪೊಲೀಸರು ಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಯಾಗಿ ಅರ್ಜಿದಾರರು ಠಾಣೆಗೆ ಹೋಗಿ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಾರೆ. ಅವರು ಪೊಲೀಸರ ಕರ್ತವ್ಯಕ್ಕೆ ಎಲ್ಲೂ ಅಡ್ಡಿಪಡಿಸಿಲ್ಲ ಮತ್ತು ಕಾನೂನು ಕೈಗೆತ್ತಿಕೊಂಡಿಲ್ಲ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್, ‘ಅರ್ಜಿದಾರರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಯಬೇಕು. ಆದ್ದರಿಂದ, ಎಫ್‌ಐಆ‌ರ್ ರದ್ದುಪಡಿಸಬಾರದು’ ಎಂದು ಪ್ರತಿಪಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು. ಅಂತೆಯೇ, ವಿಚಾರಣೆಗೆ ಖುದ್ದು ಹಾಜರಾತಿಯಿಂದ ಅರ್ಜಿದಾರರಿಗೆ ವಿನಾಯಿತಿ ನೀಡಿ ಇದೇ 1ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

NO COMMENTS

LEAVE A REPLY

Please enter your comment!
Please enter your name here

Exit mobile version