ಬೆಳ್ತಂಗಡಿ : ಬೆಳಾಲಿನಲ್ಲಿ ಮನೆಗೆ ನುಗ್ಗಿ ನಿವೃತ್ತ ಶಿಕ್ಷಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬುಧವಾರ ಪಶ್ಚಿಮ ವಲಯ ಐಜಿಪಿ ಅಮೀತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ಪಡೆದು ಕೊಂಡರು. ಘಟನೆ ನಡೆದು 24ಗಂಟೆಗಳು ಕಳೆದಿದ್ದರೂ ಆರೋಪಿಗಳ ಬಗ್ಗೆ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ.ಕಾಂಪೌಂಡ್ ನ ನಿವೃತ್ತ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಭಟ್ (83) ರನ್ನು ಅವರನ್ನು 20 ರಂದು ಮಧ್ಯಾಹ್ನದ ಬಳಿಕ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಮನೆಗೆ ಬಂದ ದುಷ್ಕರ್ಮಿಗಳು ಕೊಲೆಮಾಡಿದೆ. ಮನೆಯ ಅಂಗಳದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಕೊಲೆ ಪ್ರಕರಣದ ಬಗ್ಗೆ ಪೊಲೀಸರು ಎಲ್ಲ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದರೂ ಈವರೆಗೆ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ ಎನ್ನಲಾಗಿದೆ.
ಇವರದ್ದು ಒಂಟಿ ಮನೆಯಾಗಿದ್ದು ಮನೆಯ ಸಮೀಪ ಯಾವುದೇ ಸಿ.ಸಿ ಕ್ಯಾಮೆರಾಗಳಿಲ್ಲ. ಮೃತಬಾಲಕೃಷ್ಣ ಭಟ್ ಅವರ ಪುತ್ರ ಮನೆಯಿಂದ ಪುತ್ತೂರಿಗೆ ಹೋಗಿ ಹಿಂತಿರುಗಿ ಬಂದಾಗ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಇದೀಗ ಪೊಲೀಸರು ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಮೀಪದ ಎಲ್ಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಮನೆಯಲ್ಲಿ ಯಾವುದೇ ಕಳ್ಳತನ ನಡೆದಿಲ್ಲ ಎಂಬ ಮಾಹಿತಿಯೂ ಲಭ್ಯವಾಗುತ್ತಿದ್ದು ಇದು ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಎಂಬುದು ಪೊಲೋಸರಿಂದ ಬರುತ್ತಿರುವ ಮಾಹಿತಿ,
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖಾ ತಂಡಗಳೊಂದಿಗೆ ಚರ್ಚಿಸಿ ಮಾರ್ಗದರ್ಶನ ನೀಡಿದ್ದಾರೆ.
ಕೊಲೆ ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಬಾಲಕೃಷ್ಣ ಭಟ್ ಕಿರಿಯ ಮಗ ಸುರೇಶ್ ಭಟ್ ಆ.20 ರಂದು ರಾತ್ರಿ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಿಸಲಾಗಿದೆ.
ತನಿಖೆಗಾಗಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ತಂಡ, ಧರ್ಮಸ್ಥಳ ಇಬ್ಬರು ಸಬ್ ಇನ್ಸೆಕ್ಟರ್ ಗಳ ತಂಡ ಸೇರಿದಂತೆ ನಾಲ್ಕು ವಿವಿಧ ತಂಡಗಳನ್ನು ದ.ಕ.ಎಸ್ಪಿ ಯವರು ರಚಿಸಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.