ಬೆಳ್ತಂಗಡಿ: ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರಸ್ತೆ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ’ ಚಾರ್ಮಾಡಿ ಘಾಟ್ ನಲ್ಲಿ ತಡೆಗೋಡೆ ಕುಸಿತ,ಬಿರುಕು ಮತ್ತಿತರ ಸಮಸ್ಯೆ ಗಮನಕ್ಕೆ ಬಂದಿದ್ದು,ಅದನ್ನು ಪರಿಶೀಲಿಸಲು ಬಂದಿದ್ದೇವೆ.ಹಾಗೆಯೇ ಮಡಿಕೇರಿ,ಸಕಲೇಶಪುರ ಮಾರ್ಗದಲ್ಲಿ ಗುಡ್ಡ ಕುಸಿತದ ಹಿನ್ನಲೆಯಲ್ಲಿ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಂಡು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಲು ನಿರ್ಧಾರ ತೆಗೆದುಕೊಳ್ಳಲಿದ್ದೇವೆ.
ಹಗಲಿನಲ್ಲಿಯೇ ಹೆಚ್ಚು ವಾಹನ ಬಿಡಲು ಕ್ರಮಕೈಗೊಳ್ಳಲಾಗುವುದು.ಈಗಾಗಲೇ ಬಾರಿ ಘನವಾಹನಗಳಿಗೆ ಚಾರ್ಮಾಡಿ ಘಾಟ್ ನಲ್ಲಿ ಸಂಚರಿಸಲು ಹಿಂದಿನಿಂದಲೂ ನಿಷೇಧವಿದೆ.ಸರ್ಕಾರಿ ಬಸ್, ಗೂಡ್ಸ್ ವಾಹನ, ಲಘುವಾಹನಗಳಿಗೆ ಸಂಚರಿಸಲು ಅವಕಾಶವಿದೆ.ಆದರೆ ಮತ್ತೊಮ್ಮೆ ಕೊಡಗು, ಹಾಸನ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಜನರ ಅನುಕೂಲತೆ ಮೇರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ಎಂದರು. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮಾತನಾಡಿ’ಚಾರ್ಮಾಡಿ ಘಾಟಿಯಲ್ಲಿ ರಾತ್ರಿಯ ಹೊತ್ತಲ್ಲಿ ಮಳೆಯ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಕ್ಕೆ ಚಿಂತನೆ ನಡೆಸಲಾಗಿತ್ತು.ಆದರೆ ಮಡಿಕೇರಿ, ಶಿರಾಡಿ ಘಾಟ್ ಬಂದ್ ಆದ ಹಿನ್ನಲೆಯಲ್ಲಿ ಚಾರ್ಮಾಡಿ ಮಾತ್ರ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಸಂಚಾರ ನಿಷೇಧದ ಬಗ್ಗೆ ನಿರ್ಧಾರ ಸದ್ಯಕ್ಕೆ ಕೈಗೊಂಡಿಲ್ಲ’ ಎಂದರು.

ಸ್ಥಳೀಯ ಸಮಾಜ ಸೇವಕ ಸಂಜಯ್ ಗೌಡ, ತನುಕೊಟ್ಟಿಗೆಹಾರ, ಸಾಗರ್ ಮತ್ತಿತರರು ಚಾರ್ಮಾಡಿ ಘಾಟ್ ತಡೆಗೋಡೆ ಬಿರುಕು, ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ. ಚಾರ್ಮಾಡಿ ರಸ್ತೆಯ ಬಲ ಬದಿಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆ ಕುಸಿಯುತ್ತದೆ. ರಸ್ತೆಯ ಬದಿ ಕಾಡು ಕಡಿದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರು. ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಇಂಜೀನಿಯರ್ ಜಯಣ್ಣ ಮಾತನಾಡಿ’ ಕಳಪೆ ಕಾಮಗಾರಿ ಆಗಿಲ್ಲ.2019 ರಲ್ಲಿ ಭೂಕುಸಿತದಿಂದ ಅರ್ಧ ರಸ್ತೆಯೇ ಕುಸಿದಿತ್ತು.ಅದನ್ನು ಕೆಳಗಿನಿಂದಲೇ ರಿವಿಟ್ ಮೆಂಟ್ ಮಾಡಿ ರಸ್ತೆ ಸರಿಪಡಿಸಲಾಗಿದೆ.
ತಡೆಗೋಡೆ ಮಾಡಿ ಬಳಿಕ ಆದರ ಆ ಕಡೆ ಎರಡೂವರೆ ಮೀಟರ್ ಸ್ಲ್ಯಾಬ್ ಹಾಕಲಾಗಿದೆ.ಅದನ್ನು ಸಮತಟ್ಟು ಮಾಡಲು ರೋಲರ್ ನಿಂದ ಕಷ್ಟ ಸಾಧ್ಯ. ಹಾಗಾಗಿ ಸ್ಲ್ಯಾಬ್ ಜಗ್ಗಿದೆ.ಅದಕ್ಕೆ ವೆಟ್ ಮಿಕ್ಸ್ ಹಾಕಿ ಸರಿಪಡಿಸಲಾಗಿದೆ.ಬೇಸಿಗೆಯಲ್ಲಿ ಮತ್ತೊಮ್ಮೆ ಕಾಮಗಾರಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು.ಚರಂಡಿ ಕಾಮಗಾರಿ ಹಾಗೂ ಜಂಗಲ್ ಕಟ್ಟಿಂಗ್ ಬಗ್ಗೆ ವ್ಯವಸ್ಥೆ ಮಾಡಲಾಗುವುದು. ಲಘು ಹಾಗೂ ಸಾಮಾನ್ಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಈ ರಸ್ತೆ ಯೋಗ್ಯವಾಗಿದೆ’ ಎಂದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಭೇಟಿಯ ಸಂದರ್ಭದಲ್ಲಿ ಸಿಇಒ ಕೆ.ಎಸ್.ಗೀತಾ, ಎಇಇ ಕಾಂಬ್ಳೆ, ಎಇ ಸಂತೋಷ್,ಮೂಡಿಗೆರೆ ಇನ್ ಸ್ಪೆಕ್ಟರ್ ಸೋಮೇಗೌಡ,ಬಣಕಲ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಮತ್ತಿತರರು ಇದ್ದರು.