ಬೆಳ್ತಂಗಡಿ; ತಾಲೂಕಿನ ತಣ್ಣೀರುಪಂಥ ಗ್ರಾಮಪಂಚಾಯತು ವ್ಯಾಪ್ತಿಯ ತುರ್ಕಳಿಕೆ ಶಾಲೆಗೆ ಹೋಗುವ ಮಕ್ಕಳು ಅಪಾಯಕಾರಿಯಾದ ಸ್ಥಿತಿಯಲ್ಲಿ ಸಂಚರಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದ್ದು ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ತಾಲೂಕಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತುರ್ಕಳಿಕೆ ಶಾಲೆಗೆ ಹೋಗಿ ಮಕ್ಕಳು ನೀರಿನ ಹರಿವು ಹೆಚ್ಚಾಗಿರುವ ತೋಡಿನ ಬದಿಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಮನೆಗೆ ಹಿಂತಿರುಗುತ್ತಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಜಿಲ್ಲಾಧಿಕಾರಿಯವರ ಸೂಚನೆಯಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕಾಲುದಾರಿ ಖಾಸಗಿ ಜಾಗದ ಮೂಲಕ ಹಾದು ಹೋಗುತ್ತಿದ್ದು ಈ ಹಿನ್ನಲೆಯಲ್ಲಿ ಅಧಿಕಾರಿಗಳು ಜಾಗದ ಮಾಲಕರೊಂದಿಗೆ ಹಾಗೂ ಈ ದಾರಿಯ ಮೂಲಕ ನಡೆದಾಡುವ ಮಕ್ಕಳ ಪೋಷಕರೊಂದಿಗೆ ಮಾತುಕತೆ ನಡೆಸಿದರು.
ಈ ಕಾಲುದಾರಿಯನ್ನು ನಡೆದಾಡಲು ಯೋಗ್ಯವಾದ ರೀತಿಯಲ್ಲಿ ಬಲಪಡಿಸಿ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಮಪಂಚಾಯತು ಹಾಗೂ ಇಂಜಿನಿಯರ್ ಗಳಿಗೆ ತಹಶೀಲ್ದಾರರು ಸೂಚನೆ ನೀಡಿದ್ದಾರೆ.

ಮೂವರು ಮಕ್ಕಳು ಈ ಅಪಾಯಕಾರಿಯಾಗಿರುವ ಕಾಲುದಾರಿಯಲ್ಕಿ ಹೋಗುತ್ತಿದ್ದಾರೆ. ಕಾಲುದಾರಿಯನ್ನು ಸಾಧ್ಯವಾದಷ್ಟು ಸರಿಪಡಿಸಲು ಸೂಚನೆ ನೀಡಲಾಗಿದೆ. ಈ ಮಕ್ಕಳಿಗೆ ಬದಲಿ ರಸ್ತೆಯಿದೆ ಆದರೆ ಅದು ದೂರವಾಗುತ್ತಿರುವ ಹಿನ್ನಲೆಯಲ್ಲಿ ಈ ದಾರಿಯಲ್ಲಿ ಓಡಾಡುತ್ತಿದ್ದಾರೆ. ಕಾಲು ದಾರಿಯನ್ನು ದುರಸ್ತಿಪಡಿಸುವ ಸೂಚನೆ ನೀಡಿದ್ದು ಎರಡು ಮೂರು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು.
ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸುವ ಬಗ್ಗೆಯೂ ಪೋಷಕರೊಂದಿಗೆ ಮಾತುಕತೆ ನಡೆಸಲಾಗಿದೆ.
ಪೃಥ್ವಿ ಸಾನಿಕಂ
ತಹಶೀಲ್ದಾರ್ ಬೆಳ್ತಂಗಡಿಿ
