ಉಳ್ಳಾಲ: ಆವರಣ ಗೋಡೆ (ಕಂಪೌಂಡ್) ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳ ಸಹಿತ ನಾಲ್ವರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಎಂದು ಗುರುತಿಸಲಾಗಿದೆ.
ಅಬೂಬಕ್ಕರ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಯಾಸಿರ್ ಅವರ ಮನೆಯ ಗೋಡೆ ಮೇಲೆ ಬಿದ್ದು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎರಡೂ ಮನೆಗಳು ಅಕ್ಕಪಕ್ಕದಲ್ಲಿಯೇ ಇವೆ. ಆವರಣಗೋಡೆ ಇನ್ನೊಂದು ಮನೆಯ ಗೋಡೆಯ ಮೇಲೆ ಕುಸಿದು ಬಿದ್ದಿದ್ದು ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಮಲಗಿ ನಿದ್ರಿಸುತ್ತಿದ್ದವರ ಮೇಲೆ ಬಿದ್ದಿದೆ.
ಮನೆಯ ಅವಶೇಷಗಳ ಅಡಿಯಿಂದ ಮೂವರ ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಬಾಲಕಿಯೊಬ್ಬಳ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.


