ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಮಸೀದಿ ಮದ್ರಸಗಳಲ್ಲಿ ಶಸ್ತ್ರಾಸ್ತ್ರಗಳನ್ನು ಶೇಖರಿಸಲಾಗಿದೆ ಎಂಬ ಕಪೋಲಕಲ್ಪಿತ ಆರೋಪ ಮಾಡಿದ್ದು, ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಹಾಗೂ ಧಾರ್ಮಿಕ ಕೇಂದ್ರದ ಪಾವಿತ್ಯತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ .ಇದರಿಂದ ಮುಸ್ಲಿಮ್ ಸಮುದಾಯದ ಬಗ್ಗೆ ತಪ್ಪು ಕಲ್ಪನೆ ಸೃಷ್ಟಿ ಮಾಡುವ ಪ್ರಯತ್ನ ನಡೆದಿದ್ದು ಜಿಲ್ಲೆಯಲ್ಲಿ ಧರ್ಮ ಧರ್ಮಗಳ ಮಧ್ಯೆ ಗೊಂದಲ ಉಂಟಾಗಿರುವುದರಿಂದ ಶಾಸಕರ ವಿರುದ್ದ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು, ತಾಲೂಕಿನ 70 ರಷ್ಟು ಊರಿನ ಮಸೀದಿಗಳ ಆಡಳಿತ ಸಮಿತಿಗಳ ಒಕ್ಕೂಟವಾದ ಸುನ್ನೀ ಸಂಯುಕ್ತ ಜಮಾಅತ್ ನೇತೃತ್ವದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಯಿತು.
ಬೇಜವಾಬ್ದಾರಿಯುತ ಹೇಳಿಕೆ ನೀಡಿದ ಶಾಸಕರು ಮಸೀದಿಗಳಲ್ಲಿ ಶೇಖರಿಸಲಾದ ಶಸ್ತ್ರಾಸ್ತ್ರಗಳನ್ನು ಸಮುದಾಯದ ಮುಂದೆ ಪತ್ತೆಹಚ್ಚಿ ತೋರಿಸಬೇಕು. ತಪ್ಪಿದರೆ ಮುಂದೆ ಆಗುವ ಅನಾಹುತಗಳಿಗೆ ಶಾಸಕರೇ ನೇರ ಹೊಣೆಗಾರರಾಗಬಹುದು. ಈ ನಿಟ್ಟಿನಲ್ಲಿ ಠಾಣಾಧಿಕಾರಿಗಳು ಇನ್ನಷ್ಟು ಉನ್ನತ ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಆಗ್ರಹಿಸಿತು.

ತಾಲೂಕಿನ 70 ರಷ್ಟು ಮೊಹಲ್ಲಾ ಮಸೀದಿ ಆಡಳಿತ ಸಮಿತಿಗಳ ಪ್ರತಿನಿಧಿಗಳಾಗಿ ಅಧ್ಯಕ್ಷರನ್ನು ಒಳಗೊಂಡ ಸುನ್ನೀ ಸಂಯುಕ್ತ ಜಮಾಅತ್ ಪ್ರತಿನಿಧಿಗಳು ಬೆಳ್ತಂಗಡಿಯಲ್ಲಿ ವಿಶೇಷ ಸಭೆ ಸೇರಿ ಠಾಣಾಧಿಕಾರಿಗಳಲ್ಲಿ. ದೂರು ನೀಡಿದರು. ಈ ವಿಚಾರವನ್ನು ಶೀಘ್ರವಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಠಾಣಾಧಿಕಾರಿಗಳು ಭರವಸೆ ನೀಡಿದರು. ನಿಯೋಗದಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ, ನಾಯಕರಾದ ಅಶ್ರಫ್ ಸಖಾಫಿ ಮೂಡಡ್ಕ, ಮುಹಮ್ಮದ್ ರಫೀ ಬೆಳ್ತಂಗಡಿ, ಎಕೆ ಅಹ್ಮದ್, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಬದ್ರುದ್ದೀನ್ ಪರಪ್ಪು, ವಕೀಲರಾದ ಶಿವಕುಮಾರ್, ಅಬ್ಬಾಸ್ ಬಟ್ಲಡ್ಕ, ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ತಾಹಿರ್ ಸಖಾಫಿ, ವಝೀರ್ ಬಂಗಾಡಿ ,ಇಕ್ಬಾಲ್ ಮಾಚಾರ್, ಸಲೀಂ ಕನ್ಯಾಡಿ, ಕಾಸಿಂ ಮುಸ್ಲಿಯಾರ್ ಮಾಚಾರ್ , ನಝೀರ್ ಪೆರ್ದಾಡಿ ಹಾಗೂ ವಿವಿಧ ಮಸೀದಿಗಳ ಅಧ್ಯಕ್ಷರು, ಸಂಯುಕ್ತ ಜಮಾಅತ್ ಪದಾಧಿಕಾರಿಗಳು ಜೊತೆಗಿದ್ದರು.
