Home ರಾಜಕೀಯ ಸಮಾಚಾರ ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಒಳಗೆ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು; ರಮೇಶ್ ಕುಮಾರ್

ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಒಳಗೆ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು; ರಮೇಶ್ ಕುಮಾರ್

266
0

ಬೆಳ್ತಂಗಡಿ : ‘ವಸಂತ ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಆದರೆ ಅವರು ಬಹಳ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು. ಅವರ ಮರಣದ ಬಳಿಕವೂ ಅವರಿಗೆ ಇಷ್ಟೊಂದು ಗೌರವ, ಪ್ರೀತಿ ಸಿಗುತ್ತಿದೆಯೆಂದರೆ ಅವರು ಈ ಭಾಗದ ದೇವರಾಜ ಅರಸು ಆಗಿದ್ದಾರೆ’ ಎಂದು ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಈಚೆಗೆ ನಿಧನರಾದ ಮಾಜಿ ಶಾಸಕ ಕೆ ವಸಂತ ಬಂಗೇರರಿಗೆ ಸಾವಿರದ ನುಡಿನಮನಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ವಸಂತ ಬಂಗೇರ ತರಹ ಬದುಕುವುದು ಬಹಳ ಕಷ್ಟ. ಅವರು ಕೀರ್ತಿಯನ್ನು ಬಿಟ್ಟು ಹೋಗಿದ್ದಾರೆ. ಜನರ ತಿರಸ್ಕಾರಕ್ಕೆ ಒಳಗಾಗದೆ ಗೌರವಕ್ಕೆ ಒಳಗಾದವರು. ನಾವು ಒಳ್ಳೆಯದನ್ನು ಮಾಡಿದಾಗ ಜನ ಸತ್ತ ಮೇಲೆ ನೆನಪು ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿ ಅವರು. ಜನಪರವಾಗಿರುವವರಿಗೆ, ಸ್ವಭಾವತಃ ಅನ್ಯಾಯದ ವಿರುದ್ಧ ಸಿಡಿದೇಳುವ ಮನೋಭಾವವಿದ್ದವರಿಗೆ ಮನೆ, ಮಕ್ಕಳು ಕಡೆಗೆ ನೆನಪಿಗೆ ಬರುತ್ತಾರೆ. ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಮನುಷ್ಯನಿಗೆ ಗೌರವ, ಮರ್ಯಾದೆ ಸಿಗುವುದು ಅವನು ಸಮಾಜದಲ್ಲಿ ಸಂಪಾದಿಸಿದ ಸ್ಥಾನಮಾನದಿಂದ ಎಂಬುದಕ್ಕೆ ಅವರ ಅಂತಿಮ ದರ್ಶನ ಪಡೆದ ಹಾಗೂ ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಸಮೂಹವೇ ನಿದರ್ಶನ’ ಎಂದರು.
ನಾನು ಒಂದು ವರ್ಷದಿಂದ ಅಜ್ಞಾತವಾಸದಲ್ಲಿದ್ದೆ. ಯಾರು ಕರೆದರೂ ಹೋಗುತ್ತಿರಲಿಲ್ಲ. ವಸಂತ ಬಂಗೇರರ ಸಾವು ಮನಸ್ಸಿಗೆ ಬಹಳ ನೋವು ತಂದಿದೆ. ಆ ಕುಟುಂಬಕ್ಕೆ ನಿಮ್ಮ ನೋವು ನನ್ನ ನೋವು ಎಂದು ತಿಳಿಸಬೇಕು ಎಂಬ ಕಾರಣಕ್ಕೆ ಬಂದಿದ್ದೇನೆ. ವಸಂತ ಬಂಗೇರರು ಮಕ್ಕಳಿಗೆ ತಂದೆಯಾಗಿ ಆಸ್ತಿ ಮಾಡದೇ ಹೋದರೂ ಸಮಾಜದಲ್ಲಿ ಸದಾ ತಲೆ ಎತ್ತಿ ಬದುಕುವ ಗೌರವದ ಜೀವನ ಮಾಡಿದ್ದಾರೆ. ಪತ್ನಿ ಮಕ್ಕಳಿಗೆ ದುರಾಸೆ ಇದ್ದಿದ್ದರೆ ಅವರಲ್ಲಿದ್ದ ಬಡವರ ಸೇವೆಯೆಂಬ ತಪಸ್ಸು ನೆರವೇರುತ್ತಿರಲಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

LEAVE A REPLY

Please enter your comment!
Please enter your name here