Home ಸ್ಥಳೀಯ ಸಮಾಚಾರ ಹಿರಿಯ ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಹಿರಿಯ ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

0

ಮಂಗಳೂರು: ಕನ್ನಡ, ತುಳು ಸಾಹಿತಿ, ತುಳು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ (79)ಅವರು ಪುತ್ತೂರಿನ ಸ್ವಗೃಹದಲ್ಲಿ ಮಂಗಳವಾರ ರಾತ್ರಿ ನಿಧನರಾದರು.

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹಾಗೂ ರಿಜಿಸ್ಟ್ರಾ‌ರ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು
ಜಾನಪದ ಕ್ಷೇತ್ರದ ಸಂಶೋಧನೆಯ ಮೂಲಕ ತುಳುನಾಡಿನ ಪರಂಪರೆಯನ್ನು ಜನರಿಗೆ ತಿಳಿಸುವಲ್ಲಿ ಹಾಗೂ ಅವುಗಳ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಕೆದಂಬಾಡಿ ರಾಮೇಗೌಡರು ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ 1830ರ ದಶಕದಲ್ಲಿ ನಡೆದಿದ್ದ ತುಳುನಾಡಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬೆಳಕಿಗೆ ತರುವಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು.

ಬೆಟ್ಟಂಪಾಡಿ ಹಾಗೂ ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ಳಾರೆ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಪೂರೈಸಿದರು. ನಂತರ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಶಿಕ್ಷಣ ಪಡೆದಿದ್ದರು.
1963ರಲ್ಲಿ ಪುತ್ತೂರು ತಾಲ್ಲೂಕಿನ ಕುಂತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕನಾಗಿ ಸೇರಿದ ಅವರು ನಂತರ ಕೆಯ್ಯರು, ಕಾವು ಮಾಡೂರು, ಸಾಮೆತ್ತಡ್ಕ ಮೊದಲಾದ ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ನಡುವೆ ಬಿ.ಎ ಬಿ.ಇಡಿ ಹಾಗೂ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ ಶಿಕ್ಷಣ ಪಡೆದು ಉಪ್ಪಿನಂಗಡಿ, ಬೊಕ್ಕಪಟ್ಟ, ಬೆಟ್ಟಂಪಾಡಿ ಮತ್ತು ಕಾಣಿಯೂರಿನ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಸವಣೂರಿನ ವಿದ್ಯಾರಶ್ಮಿ ಶಿಕ್ಷಕ ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಗೌರವ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ತುಳುನಾಡಿನ ಜಾನಪದ ಸಂಶೋಧನೆಗೆ ಹಾಗೂ ಶಾಲೆಗಳಲ್ಲಿ ತುಳು ಕಲಿಕೆಗೆ ಉತ್ತೇಜನ ನೀಡಿದ್ದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ತುಳುನಾಡಿನ ಜಾನಪದ ಸಂಶೋಧನೆಗೆ ಹಾಗೂ ಶಾಲೆಗಳಲ್ಲಿ ತುಳು ಕಲಿಕೆಗೆ ಉತ್ತೇಜನ ನೀಡಿದ್ದರು.
ಅನೇಕ ಕತೆ ಕವಿತೆಗಳನ್ನು
ರಚಿಸಿದ್ದಾರೆ. ಅವರ ಪಿಎಚ್.ಡಿ ಅಧ್ಯಯನ ಪ್ರಬಂಧ ನಲಿಕೆ ಜನಾಂಗದ ಕುಣಿತಗಳು
ಕೃತಿ ತುಳುನಾಡಿನ ಕುಣಿತ ಪ್ರಕಾರಗಳನ್ನು ಹೊರಜಗತ್ತಿಗೆ ಪರಿಚಯಿಸಿದೆ.

ಕಿರಣ, ಮೆಲುಕಾಡಿದಾಗ, ಅಜಕೆ (ತುಳು), ದುನಿಪು (ತುಳು) ಪಚ್ಚೆಕುರಲ್ (ತುಳು) ಅವರ ಕವನಸಂಕಲನಗಳು.

ತುಳು ಸಂಸ್ಕತಿದ ಪೊಲಬು, ನಾಗ ಬೆರ್ಮೆರ್, ತುಳು ಕಲ್ಪುಗ, ಕೆದಂಬಾಡಿ ರಾಮ ಗೌಡೆರ್, ಅತ್ತಾವರ ಅನಂತಾಚಾರ್ಯೆ‌ರ್, ನಾಗ ಬೆರ್ಮೆ, ಕೆನರಾ ರೈತ ಬಂಡಾಯ, ತುಳುನಾಡಿನ ಪಾಣಾರರು, ತುಳುನಾಡಿನ ಜನಪದ ಕಥೆಗಳುವಿಶಿಷ್ಟ ತುಳುನಾಡು ಅವರ ಕೃತಿಗಳು.

ತುಳುವ ಸಿರಿ, ತುಳುವ ಮಲ್ಲಿಗೆ, ಅರ್ತಿದ ಪೂ, ಶ್ರೀ ಕ್ಷೇತ್ರ ದರ್ಶನ ಹಾಗೂ ಪ್ರಣಾಮ ಮೊದಲಾದ ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚಿಸಿದ್ದರು.

ಅವರಿಗೆ ಪತ್ನಿ ಸುಮಾ ಆರ್. ಆಚಾರ್, ಪುತ್ರಿಯರಾದ ಕಿರಣ ಪಿ.ಆರ್, ಸುಪ್ರಿಯ ಪಿ.ಆ‌ರ್, ಮಗ ಹರ್ಷವರ್ಧನ ಪಿ.ಆರ್ ಇದ್ದಾರೆ.

ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಅವರ ಮನೆಯಾದ ಪುತ್ತೂರು ತಾಲ್ಲೂಕಿನ ಪಾಲ್ತಾಡಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version