ಬೆಂಗಳೂರು; ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ವಿಡಿಯೊ ಹಗರಣ ಗೊತ್ತಿದ್ದರೂ ನೀವು ಮೈತ್ರಿ ಮಾಡಿಕೊಂಡಿದ್ದು ಮೊದಲ ತಪ್ಪು, ಅವರಿಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ನೀಡಿದ್ದು ಎರಡನೇ ತಪ್ಪು, ಹಗರಣ ಬೆಳಕಿಗೆ ಬಂದ ಮೇಲೆ ಅವರನ್ನು ವಿದೇಶಕ್ಕೆ ಹೋಗಲು ಬಿಟ್ಟಿದ್ದು ಇನ್ನೊಂದು ತಪ್ಪು ಎಂದು ಕಿಡಿಕಾರಿದ್ದಾರೆ. ಆರೋಪಿ ಪ್ರಜ್ವಲ್ ರೇವಣ್ಣ ಭಾರತದಲ್ಲಿ ವಿಚಾರಣೆ ಎದುರಿಸಬೇಕು. ಹೀಗಾಗಿ ಕೂಡಲೇ ಅವರ ಪಾಸ್‌ಪೋರ್ಟ್ ರದ್ದು ಮಾಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಸಿದ್ದರಾಮಯ್ಯ ಅವರು.
“ಮಹಿಳಾ ದೌರ್ಜನ್ಯದಂತಹ ಗುರುತರ ಆರೋಪ ಹೊತ್ತಿರುವ ಹಾಲಿ ಸಂಸದ ಹಾಗೂ ಎನ್‌ಡಿಎ ಮೈತ್ರಿಕೂಟದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದೆ.
ಈ ನಡುವೆ ಆರೋಪಿಯು ರಾಜತಾಂತ್ರಿಕ ಪಾಸ್‌ಪೋರ್ಟನ್ನು ಬಳಕೆ ಮಾಡಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಎಸ್.ಐ.ಟಿ ಯು ತನಿಖೆಯನ್ನು ಮುಂದುವರೆಸಬೇಕಾದರೆ ಆರೋಪಿಯ ವಿಚಾರಣೆ ನಡೆಸುವ ಅಗತ್ಯವಿದೆ. ಹಾಗಾಗಿ ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಗಳು ತಕ್ಷಣ ಕಾರ್ಯಪ್ರವೃತ್ತವಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ಹಿಂಪಡೆಯುವ ಜೊತೆಗೆ ಅಂತಾರಾಷ್ಟ್ರೀಯ ಪೊಲೀಸ್ ಏಜೆನ್ಸಿಗಳನ್ನು ಬಳಸಿಕೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರನ್ನು ಮರಳಿ ಭಾರತಕ್ಕೆ ಕರೆತರಲು ನೆರವಾಗಬೇಕು ಎಂದು ಪ್ರಧಾನಿ Narendra Modi ಅವರಿಗೆ ಪತ್ರ ಬರೆದಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.
