ಬೆಳ್ತಂಗಡಿ; ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೆಯ ವರ್ಷದ ಸಾಮೂಹಿಕ ವಿವಾಹ ಬುಧವಾರ ಸಂಜೆ 6.45ರ ಗೋಧೂಳಿ ಲಗ್ನದಲ್ಲಿ ಸಂಭ್ರಮದಿಂದ ನಡೆಯಿತು.
ನಾಡಿನ ವಿವಿಧ ಭಾಗಗಳ 123ಮಂದಿ ವಧು ವರರು ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಮಾಣ ಸ್ವೀಕರಿಸಿ ವೈವಾಹಿಕ ಜೀವನವನ್ನು ಪ್ರವೇಶಿಸಿದರು.
ವಧು ವರೆನ್ನು ಆಶೀರ್ವದಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಧರ್ಮಸ್ಥಳ ದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಪವಿತ್ರವಾದ ಕಾರ್ಯ ಎಂದು ಭಾವಿಸಿ ಬರುತ್ತಿದ್ದಾರೆ.ಅಂತರ್ಜಾತಿ ವಿವಾಹಗಳೂ ಆಗುತ್ತಿದೆ. ಇದು ಉತ್ತಮವಿಚಾರ ಎಂದರು. ಕುಟುಂಬದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಎಚ್ಚರಿಕೆಯಿಂದ ಸಂಸಾರ ನಡೆಸಿ ಎಂದು ಶುಭ ಹಾರೈಸಿದರು.
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಧಿಗಳಾಗಿ ಆಗಮಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ
ಜೀವನದಲ್ಲಿ ಸಂಸ್ಕಾರವನ್ನು ಕಲಿಯಬೇಕಾಗಿದೆ. ಮಕ್ಕಳಿಗೆ ಉತ್ತಮಸಂಸ್ಕಾರ ನೀಡಿದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಧರ್ಮಸ್ಥಳದಂತಹ ಕ್ಷೇತ್ರಗಳು ಜನತೆಗೆ ಸಂಸ್ಕಾರ ನೀಡುವ ಕಾರ್ಯವನ್ನು ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೆಂದ್ರಕುಮಾರ್, ಶಾಂತಾ ದೊಡ್ಡಣ್ಣ ಉಪಸ್ಥಿತರಿದ್ದರು.
ಡಿ ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು,
ಡಾ. ಸುನಿಲ್ ಪಂಡಿತ್ ದಾಂಪತ್ಯ ದೀಕ್ಷೆ ಬೋಧಿಸಿದರು, ಶ್ರೀನಿವಾಸ ರಾವ್ ಹಾಗೂ ಪೂಜಾ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ರತ್ನವರ್ಮ ಜೈನ್ ವಂದಿಸಿದರು.