Home ರಾಜಕೀಯ ಸಮಾಚಾರ ಎರಡನೇ ಹಂತದಲ್ಲಿ ಶುಕ್ರವಾರ 88 ಕ್ಷೇತ್ರಗಳಿಗೆ ಚುನಾವಣೆ

ಎರಡನೇ ಹಂತದಲ್ಲಿ ಶುಕ್ರವಾರ 88 ಕ್ಷೇತ್ರಗಳಿಗೆ ಚುನಾವಣೆ

118
0

ನವದೆಹಲಿ: 18 ನೇ ಲೋಕಸಭೆ ಚುನಾವಣೆ 2024 ರ ಎರಡನೇ ಹಂತವು ನಾಳೆ ಏಪ್ರಿಲ್ 26 ರಂದು(ಶುಕ್ರವಾರ) ನಡೆಯಲಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 88 ಲೋಕಸಭಾ ಕ್ಷೇತ್ರಗಳ ಮತದಾರರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಗಳಾಗಲಿದ್ದಾರೆ.

ಕೇರಳದಲ್ಲಿ ಎಲ್ಲಾ 20, ಕರ್ನಾಟಕದಲ್ಲಿ 14, ರಾಜಸ್ಥಾನದಲ್ಲಿ 13, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 6, ಬಿಹಾರ ಮತ್ತು ಅಸ್ಸಾಂನಲ್ಲಿ ತಲಾ 5, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3 ಮತ್ತು ತ್ರಿಪುರಾ,
ಮಣಿಪುರ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಸ್ಥಾನಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಅಭ್ಯರ್ಥಿಯ ಸಾವಿನಿಂದಾಗಿ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯುವುದಿಲ್ಲ ಎಂದು ಚುನಾವಣಾ ಆಯೋಗ ಈ ಹಿಂದೆ ಘೋಷಿಸಿತ್ತು. ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.

ಎರಡನೇ ಹಂತದ ಚುನಾವಣಾ ಸಮರದಲ್ಲಿ ಹಲವು ಪ್ರಮುಖ ಅಭ್ಯರ್ಥಿಗಳು ಸೆಣಸುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಶಶಿ ತರೂರ್, ಕೆ.ಮುರಳೀಧರನ್ ಮತ್ತು ಕೆ.ಸುಧಾಕರನ್, ಸಿಪಿಎಂ ಅಭ್ಯರ್ಥಿಗಳಾದ ಎಲಮರಮ್ ಕರೀಂ, ಕೆ.ಕೆ.ಶೈಲಜಾ, ಸಿ.ರವೀಂದ್ರನಾಥ್ ಮತ್ತು ಎಂ.ವಿ.ಜಯರಾಜನ್ ಕಣದಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದ(ಬಿಜೆಪಿ) ಕೆ ಸುರೇಂದ್ರನ್, ಸುರೇಶ್ ಗೋಪಿ, ವಿ. ಮುರಳೀಧರನ್ ಮತ್ತು ರಾಜೀವ್ ಚಂದ್ರಶೇಖರ್ ಕೂಡ ದಕ್ಷಿಣ ರಾಜ್ಯದಿಂದ ಕೇಸರಿ ಪಕ್ಷದ ಖಾತೆ ತೆರೆಯಲು ಪ್ರಯತ್ನಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಸಿ.ಎನ್. ಮಂಜುನಾಥ್ ಮತ್ತು ಗೋವಿಂದ್ ಕಾರಜೋಳ ಪ್ರಮುಖ ಅಭ್ಯರ್ಥಿಗಳು. ಕಾಂಗ್ರೆಸ್ ನ ಡಿ.ಕೆ.ಸುರೇಶ್, ರಾಜೀವ್ ಗೌಡ, ಸೌಮ್ಯಾರೆಡ್ಡಿ, ಬಿ.ಎನ್.ಚಂದ್ರಪ್ಪ, ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಜನತಾದಳ ಸೆಕ್ಯುಲರ್(ಜೆಡಿಎಸ್)ನ ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರೂ ಕಣದಲ್ಲಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಈ 88 ಸ್ಥಾನಗಳಲ್ಲಿ 61 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ನೇತೃತ್ವದ ಯುಪಿಎ 24 ಸ್ಥಾನಗಳನ್ನು ಗೆದ್ದುಕೊಂಡಿದ್ದರು.
ಮೂರು ಸ್ಥಾನಗಳು ಇತರರ ಪಾಲಾಗಿದ್ದವು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎರಡನೇ ಹಂತದ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.

LEAVE A REPLY

Please enter your comment!
Please enter your name here