ಬೆಳ್ತಂಗಡಿ; ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ತಾಲೂಕಿನ ನಾವೂರು ಗ್ರಾಮದ ಮೂಲನಿವಾಸಿ ಮಲೆಕುಡಿಯ ಸಮುದಾಯದವರು ತಮನ್ನು ಎಲ್ಲ ರಾಜಕೀಯ ಪಕ್ಷಗಳೂ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಈ ಬಾರಿ ನೋಟ ಚಲಾಯಿಸಲು ನಿರ್ಧರಿಸಿದ್ದು ಈ ಬಗ್ಗೆ ತಮ್ಮ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ನಾವೂರು ಗ್ರಾಮದ ಅಲ್ಯ, ಪುಳಿತ್ತಡಿ, ಎರ್ಮಲೆ ಮಂಜಲ,ಕುದ್ಕೊಳಿ, ಕಾಸರೋಳಿ ಪರಿಸರದ ಆದಿವಾಸಿ ಕುಟುಂಬಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತವನ್ನು ಚಲಾಯಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.ಈ ಪರಿಸರದಲ್ಲಿ 22 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ಜೀವನ ನಡೆಸುತ್ತಿದ್ದು ಸುಮಾರು 100ಮಂದಿ ಮತದಾರರಿದ್ದಾರೆ .
ದಶಕಗಳಿಂದ ಈ ಜನರು ತಮ್ಮ ಪ್ರದೇಶಕ್ಕೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಕುದುರೇಮುಖ ರಾಷ್ಟೀಯ ಉದ್ಯಾನವದ ಒಳಗಿರುವ ಈ ಕುಟುಂಬಗಳಿಗೆ ಇನ್ನೂ ಯಾವುದೇ ಮೂಲಭೂತ ಸೌಲಭ್ಯಗಳು ಲಭಿಸಿಲ್ಲ.
ಗ್ರಾಮಪಂಚಾಯತಿನಿಂದ ಆರಂಭಿಸಿ ಪ್ರಧಾನಿಯವರೆಗೆ ಎಲ್ಲರಿಗೂ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.
ತಮ್ಮ ಬೇಡಿಕೆಗಳಿಗೆ ಯಾವ ರಾಜಕೀಯ ಪಕ್ಷಗಳೂ ಸರಕಾರಗಳೂ ಸ್ಪಂದಿಸಲಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ.
ಮೀಟರ್ ಬಂದಿದೆ ಕರೆಂಟ್ ಬಂದಿಲ್ಲ
ಪುಳಿತ್ತಡಿ ಪರಿಸರದಲ್ಲಿ ಇನ್ನೂ ಕರೆಂಟ್ ಬಂದಿಲ್ಲ ಆದರೆ ಅವರ ಮನೆಗಳಲ್ಲೆಲ್ಲ ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ಮೀಟರ್ ಅಳವಡಿಸಿ ಆರು ವರ್ಷಗಳೇ ಕಳೆದಿದೆ ಎನ್ನುತ್ತಾರೆ ಇಲ್ಲಿನ ಜನರು. 2017ರ ವೇಳೆಗೆ ಏಕಾಏಕಿ ಗುತ್ತಿಗೆದಾರರು ಬಂದು ಇವರ ಮನೆಗಳಿಗೆ ಮೀಟರ್ ಅಳವಡಿಸಿದ್ದರು. ಆದರೆ ಮತ್ತೆ ಯಾರೂ ಇತ್ತ ತಿರುಗಿ ನೋಡಿಲ್ಲ. ಅರಣ್ಯದ ನಡುವೆ ವಾಸಿಸುತ್ತಿರುವ ಈ ಜನರಿಗೆ ವಿದ್ಯುತ್ ಸಂಪರ್ಕ ಇಲ್ಲದಕಾರಣ ಕತ್ತಲಾದಮೇಲೆ ಇವರ ಬದುಕೇ ದುಸ್ತರ, ಕೃಷಿಗೆ ನೀರುಣಿಸಲೂ ಸಾಧ್ಯವಾಗದೆ ಇವರು ಸಂಕಷ್ಟದಲ್ಲಿದ್ದಾರೆ.
ಮೆಸ್ಕಾಂ ಅಧಿಕಾರಿಗಳು ಇಲ್ಲಿಗೆ ವಿದ್ಯುತ್ ಒದಗಿಸಲು ಈ ಬಗ್ಗೆ ಸರ್ವೆ ನಡೆಸಿದ್ದು 2017ರಲ್ಲಿ 46,81,398 ರೂಗಳ ಅಂದಾಜುಪಟ್ಟಿ ತಯಾರಿಸಿದ್ದರು. ಇದಕ್ಕೆ ಅರಣ್ಯ ಇಲಾಖೆಯ ಅನುಮೋದನೆ ಪಡೆಯಲು ನಿಗದಿತ ನಮುನೆಯಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ. ಆದರೆ ಈ ಆನ್ ಲೈನ್ ಅರ್ಜಿ ಏನಾಗಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ.
ಮಳೆಗಾಲ ಬಂದರೆ ವಾಹನ ಸಂಚಾರ ಅಸಾಧ್ಯ
ಈ ಪ್ರದೇಶಕ್ಕೆಸಂಪರ್ಕ ಕಲ್ಪಿಸುವ ರಸ್ತೆ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುತ್ತಿದ್ದು ಇವರಿಗೆ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಅವಕಾಶವನ್ನೇ ನೀಡುವುದಿಲ್ಲ. ಮಳೆಗಾಲ ಬಂದರೆ ಇಲ್ಲಿನ ನಿವಾಸಿಗಳ ಸಂಕಷ್ಟ ಆರಂಭವಾಗುತ್ತದೆ. ಕಚ್ಚರಸ್ತೆ ಸಂಪೂರ್ಣವಾಗಿ ಮಳೆಯಿಂದಾಗಿ ಅಸ್ತವ್ಯಸ್ತವಾಗುತ್ತದೆ ವಾಹನಸಂಚಾರವೇ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತದೆ.
ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು ಎಂಬುದು ಇಲ್ಲನ ನಿವಾಸಿಗಳ ಬೇಡಿಕೆ ಆದರೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯ ಪರವಾನಿಗೆ ಬೇಕು ಅದು ಸಿಗುವುದು ಕನಸಿನ ಮಾತು. ಅದಕ್ಕಾಗಿ ಶ್ರಮಿಸಲು ಈ ಆದಿವಾಸಿಗರ ಬೆರವಿಗೆ ನಿಲ್ಲಲು ಯಾರೂ ಇಲ್ಲವಾಗಿದ್ದಾರೆ.
ಈಬಾರಿ ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವುದಿಲ್ಲ ನೋಟಾಕ್ಕೆ ಮತ ಚಲಾಯಿಸಲು ಎಲ್ಲರೂ ಒಟ್ಟಾಗಿ ನಿರ್ಧರಿಸಿದ್ದೇವೆ. ಇಲ್ಲಿ ಬ್ಯಾನರ್ ಅನ್ನೂ ಅಳವಡಿಸಿದ್ದೇವೆ ಆದರೆ ಈ ವರೆಗೆ ಯಾವುದೇ ಅಧಿಕಾರಿಗಳು ರಾಜಕೀಯ ಪಕ್ಷದವರು ನಮ್ಮತ್ತ ಬಂದಿಲ್ಲ. ಪಕ್ಷಗಳ ಕಾರ್ಯಕರ್ತರೂ ಚುನಾವಣಾ ಪ್ರಚಾರಕ್ಕೂ ಬಂದಿಲ್ಲ. ನಮ್ಮ ಬೇಡಿಕೆ ಈಡೇರುವ ವರೆಗೆ ಈ ನಿರ್ಧಾರ ದಿಂದ ನಾವು ಹಿಂದೆ ಸರಿಯುವುದಿಲ್ಲ. ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ನಾವು ನೋಟಾವನ್ನೇ ಚಲಾಯಿಸುತ್ತೇವೆ
ನಾಗೇಶ್ ಎಂ
ಸ್ಥಳೀಯ ನಿವಾಸಿ
ಕುದುರೇಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ದಿನದಿಂದ ನಮ್ಮ ಸಂಕಷ್ಟ ಗಳು ಆರಂಭವಾಗಿದೆ ಎಲ್ಲ ರಾಜಕೀಯದವರ ಮುಂದೆ ಕೈಚಾಚಿದ್ದೇವೆ ಯಾರೂ ನಮ್ಮ ಸಮಸ್ಯೆಗಳಿಗೆ ಪರಿಹಾರಕಾಣುವ ಉತ್ಸಾಹ ತೋರಿಸಿಲ್ಲ. ಆದ್ದರಿಂದ ಈ ಬಾರಿ ನೋಟಾ ಚಲಾಯಿಸಲು ನಿರ್ಧರಿಸಿದ್ದೇವೆ. ಬೆಳ್ತಂಗಡಿ ತಾಲೂಕಿನಲ್ಲಿ ಇನ್ನೂ ಹಲವು ಗ್ರಾಮಗಳಲ್ಲಿ ಆದಿವಾಸಿ ಸಮುದಾಯದವರು ಇದೇ ಸಮಸ್ಯೆ ಎದುರಿಸುತ್ತುದ್ದಾರೆ ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟು ಸೇರಿಸಿ ನೋಟಾ ಅಭಿಯಾನವನ್ನು ಹಮ್ಮಿಕೊಳ್ಳುತ್ತೇವೆ.
ಶಿವಪ್ಪ ಮಲೆಕುಡಿಯ
ಮಾಜಿ ಗ್ರಾಮಪಂಚಾಯತು ಸದಸ್ಯ