ಉಜಿರೆ: ರಕ್ತದಾನ ದಾನಗಳಲ್ಲೇ ಅತಿ ಶ್ರೇಷ್ಠವಾದುದು. ರಕ್ತದಾನದಿಂದ ಅಗತ್ಯವುಳ್ಳವರಿಗೆ ಜೀವದಾನ ನೀಡಿದಂತೆ . ಯಾವುದೇ ಜಾತಿ,ಮತ,ಧರ್ಮ ಭೇದವಿಲ್ಲದೆ ಆರೋಗ್ಯವುಳ್ಳವರು ರಕ್ತದಾನ ಮಾಡಿ ಇನ್ನೊಬ್ಬರಿಗೆ ನೆರವಾಗುವುದು ಮಾನವೀಯ ಸೇವೆಯಾಗಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು. ಅವರು ಫೆ 25 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ (ರಿ) ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್,ಕನ್ಯಾಡಿಯ ಸೇವಾಭಾರತಿ (ರಿ) ಹಾಗು ಮಂಗಳೂರಿನ ಕೆ. ಎಂ.ಸಿ. ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಕೆ. ಎಂ.ಸಿ. ಆಸ್ಪತ್ರೆಯ ವೈದ್ಯೆ ಡಾ!ಶ್ರೇಯಾ ಒಬ್ಬರು ನೀಡಿದ ರಕ್ತದಾನ ಮೂರು ಜೀವಿಗಳ ಪ್ರಾಣ ಉಳಿಸಲು ನೆರವಾಗುತ್ತದೆ . 18 ರಿಂದ 65 ವಯಸ್ಸಿನ ಆರೋಗ್ಯವಂತರು ರಕ್ತದಾನ ಮಾಡಿ ಇತರರಿಗೆ ನೆರವಾಗಬೇಕು ಎಂದು ನುಡಿದರು. ಸೇವಾಭಾರತಿ ಸಂಸ್ಥಾಪಕ ವಿನಾಯಕ ರಾವ್ ಪ್ರಸ್ತಾವಿಸಿ ಸೇವಾಭಾರತಿ ಜಿಲ್ಲೆಯ 6 ಆಸ್ಪತ್ರೆಗಳ ಸಹಯೋಗದಿಂದ ವರ್ಷಕ್ಕೆ 8೦೦ರಿಂದ 9೦೦ ಯೂನಿಟ್ ರಕ್ತ ಸಂಗ್ರಹಿಸಿ ಕೊಡಲಾಗುತ್ತಿದೆ. ಸಂಘಟನಾತ್ಮಕ ಸೇವಾ ಕಾರ್ಯದಲ್ಲಿ ಸಮಾಜದ ಬೇಡಿ ಕೆಗೆ ಸ್ಪಂದಿಸಿ ಜೀವ ಉಳಿಸುವ ಕಾರ್ಯದಲ್ಲಿ ,ದೀನ ದಲಿತರು,ಬಡವರು ಹಾಗು ಅವಕಾಶ ವಂಚಿತರಿಗೆ ತನ್ನಿಂದಾದ ಸೇವೆಯಲ್ಲಿ ಭಾಗಿಯಾಗುತ್ತಿದೆ ಎಂದರು. ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿ,ಸ್ವಾಗತಿಸಿದರು. ವೇದಿಕೆಯಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ,ಸೇವಾಭಾರತಿ ಅಧ್ಯಕ್ಷೆ ಶ್ರೀಮತಿ ಸ್ವರ್ಣ ಗೌರಿ,ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು ಉಪಸ್ಥಿತರಿದ್ದರು. ಲಕ್ಶ್ಮಣ ಗೌಡ ನಿರೂಪಿಸಿದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ತರ ಸಂಘದ ಅಧ್ಯಕ್ಷ ಶ್ರೀಧರ ಕೆ.,ವಿ. ವಂದಿಸಿದರು. ಶಿಬಿರದಲ್ಲಿ ಒಟ್ಟು 92 ಯೂನಿಟ್ ರಕ್ತ ಸಂಗ್ರಹಿಸಲಾಯಿತು
ಬೃಹತ್ ರಕ್ತದಾನ ಶಿಬಿರ ಆಯೋಜನೆಯಲ್ಲಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ,ಯುವ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ,ಶ್ರೀ ಶಾರದಾ ಸೇವಾ ಟ್ರಸ್ಟ್, ಪ್ರಗತಿ ಮಹಿಳ ಮಂಡಲ ,ಕಿರಿಯಾ ಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ,ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳಾಲು ಗ್ರಾಮ ಸಮಿತಿ,ವಿವೇಕಾನಂದ ನಗರ ಸರಸ್ವತಿ ಭಜನಾ ಮಂಡಳಿ,ವಿಶ್ವಕರ್ಮ ಸಹಕಾರ ಬ್ಯಾಂಕ್,ಕೂಟ ಮಹಾಜಗತ್ತು ಅಂಗ ಸಂಸ್ಥೆ, ಪ್ರಗತಿ ಯುವಕ ಮಂಡಲ ಮಾಚಾರು ,ವನದುರ್ಗ ಸ್ಪೋರ್ಟ್ಸ್ ಕ್ಲಬ್,ಭಕ್ತ ಕುಂಬಾರ ಸಂಘ ಭಾರತ್ ಆಟೋ ಕಾರ್ಸ್, ಮೂಲಾರ್ ಫ್ರೆಂಡ್ಸ್ ಮೊದಲಾದ ಸಂಘಟನೆಗಳು ಕೈಜೋಡಿಸಿ ಸಹಕರಿಸಿದ್ದವು.