ಬೆಳ್ತಂಗಡಿ; “ಜನರು ಭ್ರಮಾಲೋಕದಲ್ಲಿದ್ದು ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ,” ಎಂದು ವಿಶ್ರಾಂತ ಜಿಲ್ಲಾಧಿಕಾರಿ (ಐಎಎಸ್), ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಆದ ಎ.ಬಿ. ಇಬ್ರಾಹಿಂ,ಹೇಳಿದರು.
ಅವರು ಮಂಗಳೂರಿನಲ್ಲಿ ಡಿ.ವೈ.ಎಫ್.ಐ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು
“ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಇದು ಶೇಕಡ 100 ರಷ್ಟು ಅಕ್ಷರಸ್ಥರು ಇರುವ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ಜಿಲ್ಲೆ ಜಗತ್ತಿಗೆ ಮಾದರಿಯಾಗಬೇಕಾದ ಜಿಲ್ಲೆ. ಆದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ, ನಗರ ಕುಖ್ಯಾತಿ ಪಡೆಯುತ್ತಾ ಬಂದಿರುವ ನೆಲವಾಗಿದೆ. ಹೊರ ಜಿಲ್ಲೆಯವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಶ್ನಿಸುವಂತಾಗಿದೆ ಎಂದರು.
ಸಂವಿಧಾನ ಉಳಿಸಬೇಕೆಂದು ಪೇಪರ್‌ನ ಮೊದಲ ಪುಟದಲ್ಲಿ ಜಾಹೀರಾತು ನೀಡಿದರೆ ಸಾಕಾಗದು. ಸಂವಿಧಾನ ಉಳಿಸಲು ಚಳುವಳಿ ಕಟ್ಟಬೇಕು, ಹೋರಾಡಬೇಕು ಎಂದು ತಿಳಿಸಿದರು. ಮಂಗಳೂರನ್ನು ಕೋಮುವಾದಿಗಳ ಪ್ರಯೋಗಶಾಲೆ ಎಂದು ಕರೆಯಲಾಗುತ್ತದೆ. ಆದರೆ ಅದು ತಪ್ಪು. ಪ್ರಯೋಗ ಮುಗಿದಿದೆ, ಯಶಸ್ವಿಯಾಗಿದೆ. ಈಗ ಮಂಡ್ಯ, ಇನ್ಯಾವುದೋ ಜಿಲ್ಲೆಗೆ ವಿಸ್ತರಿಸಲಾಗುತ್ತಿದೆ ಎಂದು ಅಭಿಪ್ರಾಯಿಸಿದರು.
ಜಿಲ್ಲೆಯಲ್ಲಿ ಮಹಿಳೆ, ಅಲ್ಪಸಂಖ್ಯಾತರು, ದಲಿತರ ಮೇಲೆ ದಾಳಿಯಾಗುತ್ತಿದೆ. ಇದು ಪ್ರತಿಗಾಮಿ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಸಂಘರ್ಷ. ಇದನ್ನು ಜನರು ಅರ್ಥ ಮಾಡಿಕೊಂಡರೆ, ನಮ್ಮ ಸಂಘರ್ಷ ಜನರನ್ನು ತಲುಪಿದರೆ ಯಶಸ್ಸು. ಪ್ರಸಕ್ತ ನಮ್ಮ ನೆಲದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಬಡತನಕ್ಕಿಂತ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ. ಇದರ ಬಗ್ಗೆ ಚರ್ಚೆ ನಡೆಯುವುದು ಅನಿವಾರ್ಯ. ಎಲ್ಲಾ ಸಮುದಾಯ ಇರುವ ನೆಲದಲ್ಲಿ ಕೋಮು ಸೌಹಾರ್ದತೆ ಯಾಕೆ ನಶಿಸಿಹೋಗುತ್ತಿದೆ ಎಂಬ ಚರ್ಚೆಯಾಗಬೇಕಿದೆ ಎಂದು ಹೇಳಿದರು.