

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಾಬೆಯ ನಾಲ್ಕು ಸ್ಥಾನಗಳಿಗೆ ಇದೇ ಫೆ. 27ರಂದು ನಡೆಯುವ ರಾಜ್ಯಸಭೆಯ ಚುನಾವಣೆಗೆ ಐದನೇ ಅಭ್ಯರ್ಥಿಯಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಇಂದೇ ನಾಮಪತ್ರ ಸಲ್ಲಿಸುವುದರೊಂದಿಗೆ ರಂಗೇರಿದೆ.
ಈಗಿರುವ ವಿವಿಧ ಪಕ್ಷಗಳ ಬಲಾಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳು ಮತ್ತು ಬಿಜೆಪಿ ಒಂದು ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳಲು ಸಾಧ್ಯವಿದೆ.
ಕಾಂಗ್ರೆಸ್ ಈಗಾಗಲೆ ಜಿ.ಸಿ ಚಂದ್ರಶೇಖರ್, ನಾಸಿರ್ ಹುಸೇನ್, ಹಾಗೂ ಅಜಯ್ ಮೆಕನ್ ಅವರನ್ನು ತನ್ನ ಅಭ್ಯರ್ಥಿಗಳೆಂದು ಘೋಷಿಸಿದ್ದು ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಭಾಂಡಗೆ ಅವರು ನಾಮಪತ್ರ ಸಲ್ಕಿಸಿದ್ದಾರೆ.


ಆಡಳಿತಾರೂಢ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ತೀರ್ಮಾನಿಸಿರುವ ಮಿತ್ರ ಪಕ್ಷಗಳು ಐದನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸುವ ಮೂಲಕ ಚುನಾವಣೆಗೆ ಹೊಸ ರಂಗು ತಂದಿದ್ದಾರೆ.
ಕಾಂಗ್ರೆಸ್ 135 ಶಾಸಕರ ಬಲವನ್ನು ಹೊಂದಿದೆ. ಬಿಜೆಪಿ 66, ಜೆಡಿಎಸ್ 19, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮತ್ತು ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿ ಇದ್ದಾರೆ. ದರ್ಶನ್, ಲತಾ, ಪುಟ್ಟಸ್ವಾಮಿ ಈಗಾಗಲೆ ಕಾಂಗ್ರೆಸ್ ಜತೆ ಗುರುತಿಸಿ ಕೊಂಡಿದ್ದಾರೆ. ಜನಾರ್ದನ ರೆಡ್ಡಿ ಸಹ ಆರಂಭದಲ್ಲಿ ಕಾಂಗ್ರೆಸ್ ಜತೆಗಿರುವುದಾಗಿ ಹೇಳಿದ್ದರು. ಇತ್ತೀಚೆಗೆ, ಬಿಜೆಪಿ ಕಡೆ ಒಲವು ತೋರಿದ್ದಾರೆ.

ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತದೆ. ಕಾಂಗ್ರೆಸ್ ತನ್ನ ಪಕ್ಷದ ಅಧಿಕೃತ ಸದಸ್ಯರ ಬಲದಿಂದಲೇ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಕ್ತವಾಗಿದೆ. ಮೂವರು ಪಕ್ಷೇತರ ಸದಸ್ಯರ ಬೆಂಬಲವೂ ಅವರಿಗಿದೆ. ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬಿಜೆಪಿಯ 21 ಹೆಚ್ಚುವರಿ ಮತಗಳು, ಜೆಡಿಎಸ್‌ನ 19, ಮತ ಮತ್ತು ಕೆಆರ್‌ಪಿಪಿ ಯ ಒಂದು ಮತವನ್ನು ಪಡೆದರೆ 41ಮತಗಳಿಗೆ ತಲುಪಲಿದೆ. ಇನ್ನು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿರುವ ದರ್ಶನ್ ಪುಟ್ಟಣ್ಣಯ್ಯ , ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಅವರ ಮತಗಳನ್ನು ಪಡೆದರೂ 44 ಮತಗಳನ್ನು ತಲುಪಬಹುದಷ್ಟೆ ಇದು ಪಕ್ಷಗಳ ಬಲಾಬಲದ ಲೆಕ್ಕಾಚಾರ ವಾಗಿದ್ದು ಚುನಾವಣೆಯಲ್ಲಿ ಏನು ನಡೆಯಲಿದೆ ಎಂಬ ಕುತೂಹಲ ಉಳಿದುಕೊಂಡಿದೆ. ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿರುವ ಪಕ್ಷೇತರರನ್ನು ಮಾತ್ರವಲ್ಲ ಕನಿಷ್ಠ ಇಬ್ಬರು ಮೂವರು ಕಾಂಗ್ರೆಸ್ ಸದಸ್ಯರ ಮತಗಳು ಸಿಕ್ಕಿದರೆ ಮಾತ್ರ ಕುಪೇಂದ್ರ ರೆಡ್ಡಿ ಗೆಲುವು ಸಾಧ್ಯವಾಗಲಿದೆ. ಈಗಿನ ಸ್ಥಿತಿಯಲ್ಲಿ ಇದು ಕಷ್ಟ ಸಾಧ್ಯವಾಗಿದೆ. ಆದರೆ ಕುಪೇಂದ್ರ ರೆಡ್ಡಿಯ ರಂಗ ಪ್ರವೇಶದಿಂದ ರಾಜ್ಯಸಭಾ ಚುನಾವಣೆಗೆ ಹೊಸ ರಂಗು ಬಂದಂತಾಗಿದೆ
