ಬೆಳ್ತಂಗಡಿ: ಎಸ್.ಐ.ಟಿ ಅಧಿಕಾರಿಗಳು ತನ್ನನ್ನು ವಿಚಾರಣೆಗೆಂದು ಕರೆದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬೆದರಿಕೆ ಹಾಕಿರುವುದಾಗಿ ಸೌಜನ್ಯ ಪರ ಹೋರಾಟಗಾರ ಜಯಂತ್.ಟಿ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ;
ಜಯಂತ್ ಅವರು ನೀಡಿರುವ ದೂರಿನಲ್ಲಿ ಎಸ್.ಐ.ಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಸೈಮನ್, ಮಂಜುನಾಥ್ ಆರ್.ಜೆ, ಮಂಜುನಾಥ ಗೌಡ, ಹಾಗೂ ಗುಣಪಾಲ ಅವರು ಸೇರಿ ತನಗೆ ಬೆದರಿಕೆ ಹಾಕಿದ್ದರು, ಬಳಿಕ ದೂರು ದಾರ ಚಿನ್ನಯ್ಯನನ್ನು ಕರೆಸಿ ಆತನ ಮೂಲಕ ತನಗೆ ತೀವ್ರವಾಗಿ ಹಲ್ಲೆ ಮಾಡಿಸಿದರು. ಅದೇರೀತಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸಿ ತನಗೆ ಬೆದರಿಸಿದರು. ಸುಳ್ಳು ಹೇಳಿಕೆ ಪಡೆಯುವ ಪ್ರಯತ್ನ ನಡೆಸಿದರು ಚಿನ್ನಯ್ಯನಿಗೆ ಹೇಳಿ ತನ್ನ ಮೇಲೆ ಅವನ ಮೂಲಕ ಮತ್ತೆ ಹಲ್ಲೆ ನಡೆಸಿ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದರು.
ಅದಕ್ಕೆ ಒಪ್ಪದಿದ್ದಾಗ ದೊಡ್ಡವರ ವಿರುದ್ದ ದೂರು ನೀಡುತ್ತಿಯಾ ನಿನ್ನನ್ನು ಹಾಗೂ ನಿನ್ನೊಂದಿಗೆ ಇರುವವರನ್ನು ಜೈಲಿಗೆ ಹಾಕದೆ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಅಧಿಕಾರಿಗಳ ಹಲ್ಲೆಯಿಂದ ಗಾಯಗೊಂಡ ತಾನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿಯೂ ತಿಳಿಸಿದ್ದಾರೆ. ಅಲ್ಲದೆ ತನ್ನಿಂದ ಯಾವುದೇ ಹೇಳಿಕೆ ಪಡೆಯದೆ ಅವರಾಗಿಯೇ ಹೇಳಿಕೆಯನ್ನು ಟೈಪ್ ಮಾಡಿದ್ದಾರೆ ಪ್ರತಿ ದಿನ ಎಸ್.ಐ.ಟಿ ಕಚೇರಿಗೆ ಕರೆಸಿ ಮಾನಸಿಕ ದೈಹಿಕ ಹಿಂಸೆ ನೀಡಿದ್ದಾರೆ. ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದಾರೆ. ಎಸ್.ಐ.ಟಿ ಯಿಂದ ತನಗೆ ಬೆದರಿಕೆ ಇದ್ದ ಕಾರಣ ನ್ಯಾಯಾಲಯದಿಂದ ತಾತ್ಕಾಲಿಕ ತಡೆಲಭಿಸಿದ ಬಳಿಕ ಇದೀಗ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ತನ್ನ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ


