ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ, ವಿಠಲ ಗೌಡ ಅವರ ವಿರುದ್ದ ಬಲವಂತದ ಕ್ರಮ ಬೇಡ ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೂ ಮುಂದಿನ ವಿಚಾರಣೆಯ ವರೆಗೆ ತಾತ್ಕಲಿಕ ತಡೆಯಜ್ಞೆ ನೀಡಿದೆ.
ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ತಮಗೆ ಎಸ್.ಐ.ಟಿ ನೀಡಿರುವ ನೋಟೀಸ್ ಅನ್ನು ರದ್ದು ಪಡಿಸಬೇಕು, ಪ್ರಕರಣ ರದ್ದು ಪಡಿಸಬೇಕು ಎಂದು ಸಲ್ಲಿಸಿದ್ದ ಮನವಿಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಡೆದು ಎರಡೂ ಕಡೆಯವರ ವಾದ ವಿವಾದ ಆಲಿಸಿದ ನ್ಯಾಯಾಧೀಶರು ಈ ನಾಲ್ವರು ಹೋರಾಟಗಾರರ ವಿರುದ್ದ ಬಲವಂತದ ಕ್ರಮ ಬೇಡ ಎಂದು ಆದೇಶ ನೀಡಿದ್ದಾರೆ. ಅದೇ ರೀತಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೂ ತಡೆಯಾಜ್ಞೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ ಎಸ್.ಐ.ಟಿ ಪರ ವಕೀಲರು ಮಹೇಶ್ ಶೆಟ್ಟಿ ಹಾಗೂ ಇತರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂಬ ವಿಚಾರವನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದು ಆರೋಪಿಗಳಾಗಿ ನೋಟೀಸ್ ನೀಡಲಾಗಿದೆ ಎಂದು ವಾದಿಸಿದ್ದಾರೆ. ಈಗಾಗಲೇ ಇವರು ಸಾಕಷ್ಟು ವಿಚಾರಣೆ ಎದುರಿಸಿದ್ದಾರೆ ಎಫ್.ಐ.ಆರ್ ದಾಖಲಿಸಿರುವುದು ಸರಿಯಾಗಿಲ್ಲ ಎಂಬ ವಾದವನ್ನು ಮಂಡಿಸಿದರು.
ವಿಚಾರಣೆ ಆಲಿಸಿದ ನ್ಯಾಯಾಲಯ ಅರ್ಜಿದಾರರ ವಿರುದ್ದದ ಎಫ್.ಐ.ಆರ್ ಗೆ ಮುಂದಿನ ವಿಚಾರಣೆಯ ವರೆಗೆ ತಡೆ ನೀಡಿ ವಿಚಾರಣೆಯನ್ನು ನ12 ಕ್ಕೆ ಮುಂದೂಡಿದ್ದಾರೆ.







