



ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಇದೀಗ ಆರೋಪಿಯಾಗಿ ಜೈಲು ಸೇರಿರುವ ಚಿನ್ನಯ್ಯನ ವಿಚಾರಣೆ ನಡೆಸಲು ಎಸ್.ಐ.ಟಿ ತಂಡ ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದು ಅ17ಮತ್ತು 18ರಂದು ಚಿನ್ನಯ್ಯನ ವಿಚಾರಣೆ ಹಾಗೂ ಹೇಳಿಕೆ ದಾಖಲಿಸುವ ಕಾರ್ಯ ನಡೆಯಲಿದೆ.
ಚಿನ್ನಯ್ಯ ತಾನು ತಪ್ಪು ಒಪ್ಪಿಕೊಂಡ ಬಳಿಕ ಎಸ್.ಐ.ಟಿ ಮುಂದೆ ಹೆಣಗಳನ್ನು ಹೂತು ಹಾಕಿದ ಬಗ್ಗೆ ನೀಡಿರುವ ಹೇಳಿಕೆ ಹಾಗೂ ಇದಾದ ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳಲ್ಲಿ ಕೆಲವು ಗೊಂದಲಗಳು ಇರುವುದಾಗಿ ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ಚಿನ್ನಯ್ಯನ ಹೇಳಿಕೆ ಪಡೆಯಲು ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದರು. ಎಸ್.ಐ.ಟಿ ಮನವಿ ಆಲಿಸಿದ ನ್ಯಾಯಾಲಯ ಅ16ರಂದು ಎರಡು ದಿನಗಳ ಕಾಲ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯ ಹೇಳಿಕೆ ದಾಖಲಿಸಲು ಎಸ್.ಐ.ಟಿಯ ತನಿಖಾಧಿಕಾರಿಗೆ ಅವಕಾಶ ನೀಡಿದೆ.
ಆಗಾಗ ಹೇಳಿಕೆಗಳನ್ನು ಬದಲಿಸುತ್ತಿರುವ ಚಿನ್ನಯ್ಯ ಇನ್ನು ಎಸ್.ಐ.ಟಿ ಮುಂದೆ ಯಾವ ಹೇಳಿಕೆ ನೀಡಿಲಿದ್ದಾನೆ ಎಂಬುದು ಕುತೂಹಲದ ವಿಚಾರವಾಗಿದೆ.
ಚಿನ್ನಯ್ಯ ಆರಂಭದಲ್ಲಿ ನೀಡಿದ ಹೇಳಿಕೆಯ ಆಧಾರದಲ್ಲಿಯೇ ಎಸ್.ಐ.ಟಿ ರಚನೆಯಾಗಿ ಇಷ್ಟು ತನಿಖೆ ನಡೆಸಿತ್ತು. ತನಿಖೆಯ ನಡುವೆಯೇ ಚಿನ್ನಯ್ಯ ತನ್ನ ಹೇಳಿಕೆ ಬದಲಿಸಿ ತಾನು ಸುಳ್ಳು ಸಾಕ್ಷ್ಯ ನೀಡಿರುವುದಾಗಿ ಹೇಳಿಕೆ ನೀಡಿದ್ದ. ಚಿನ್ನಯ್ಯ ಹೇಳಿಕೆ ಬದಲಿಸಿದ ಬಳಿಕವೂ ಪ್ರಕರಣದ ತನಿಖೆ ಮುಂದುವರಿಸಿರುವ ಎಸ್.ಐ.ಟಿ ತಂಡ ಎಲ್ಲರಹೇಳಿಕೆಗಳನ್ನು ಪಡೆಯುವ ಕಾರ್ಯ ಮಾಡುತ್ತಿದೆ. ಇದೀಗ ಚಿನ್ನಯ್ಯನ ಹೇಳಿಕೆಯಲ್ಲಿ ಮತ್ತೆ ಗೊಂದಲ ಕಂಡಬಂದಿರುವ ಹಿನ್ನಲೆಯಲ್ಲಿ ಆತನ ಹೇಳಿಕೆಯನ್ನು ಮತ್ತೆ ದಾಖಲಿಸುವ ಕಾರ್ಯಕ್ಕೆ ಎಸ್.ಐ.ಟಿ ಮುಂದಾಗಿದ್ದು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಶಿವಮೊಗ್ಗ ಜೈಲಿಗೆ ತೆರಳಿ ಚಿನ್ನಯ್ಯನ ಹೇಳಿಕೆ ದಾಖಲಿಸುವ ಕಾರ್ಯ ಮಾಡಲಿದ್ದಾರೆ.
