


ಬೆಳ್ತಂಗಡಿ (ಆ-08): ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಫ್ಯೂಡಲ್ ಗೂಂಡಾಗಳ ಅಮಾನವೀಯ ಹಲ್ಲೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಸಮಿತಿ ವತಿಯಿಂದ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿಯವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನಾ ಸಬೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ಧರ್ಮಸ್ಥಳದಲ್ಲಿ ಯುಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಪೂರ್ವಯೋಜಿತ ಮತ್ತು ಸಾಕ್ಷಿ ದೂರು ಪ್ರಕರಣ ದಿಕ್ಕು ತಪ್ಪಿಸಲು ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಒಂದು ಭಾಗ. ಅನ್ಯಾಯ ಕಂಡಲ್ಲಿ ಅದನ್ನು ಪ್ರಶ್ನೆ ಮಾಡುವುದು ನಮ್ಮ ಪಕ್ಷದ ಮೂಲ ಸಿದ್ಧಾಂತ. ಪ್ರಶ್ನೆ ಮಾಡುವುದನ್ನು ಮಾಡಿಯೇ ತೀರುತ್ತೇವೆ. ಅದು ಎಷ್ಟೇ ಬಲಾಡ್ಯರಾದರೂ ಸರಿ, ಹತ್ಯೆಗಳ ಬಗ್ಗೆ ಮೌನಕ್ಕೆ ಜಾರಿದ್ದ ಬಿಜೆಪಿ ಮುಖಂಡರು ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ನಮ್ಮ ಹೋರಾಟವನ್ನು ಅಣಕಿಸಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಡಿಪಿಐಯ ಹೋರಾಟವನ್ನು ವಿರೋಧಿಸಿ ಪತ್ರಿಕಾ ಹೇಳಿಕೆ ಕೊಟ್ಟಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಗೂ ಟಾಂಗ್ ನೀಡಿದರು.

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ತಂಗಡಿ ವಿಧಾನಸಭಾ ಸದಸ್ಯರಾದ ಸಲೀಂ ಗುರುವಾಯನಕೆರೆ ಮಾತನಾಡಿ ಸತ್ಯವನ್ನು ತೋರಿಸುತ್ತಿದ್ದ ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಖಂಡನೀಯ, ಬಿಜೆಪಿ ಈ ಪ್ರಕರಣವನ್ನು ಹಿಂದು ಮುಸ್ಲಿಮ್ ಮಾಡುವುದರಲ್ಲಿ ತಲ್ಲೀನವಾಗಿದೆ, ಕಾಂಗ್ರೆಸ್ ಬಿಜೆಪಿಯೊಂದಿಗೆ ಎಜಸ್ಟ್ಮೆಂಟ್ ರಾಜಕೀಯದಲ್ಲಿ ತೊಡಗಿದೆ, ಆದ್ರೆ ಎಸ್‌ಡಿಪಿಐ ಯಾವುದೇ ಭಯವಿಲ್ಲದೆ ನೇರವಾಗಿ ಹೋರಾಟದಲ್ಲಿದೆ ಎಂದು ಹೇಳಿದರು. ಅದೇ ರೀತಿ ಎಸ್‌ಡಿಪಿಐಯು ತಿಮರೋಡಿ ಅಥವಾ ಮಟ್ಟಣ್ಣನವರ ಪರವಾಗಿಲ್ಲ ಬದಲಾಗಿ ಸೌಜನ್ಯಳ ಪರವಾಗಿದೆ, ಯಾವುದೇ ಧರ್ಮದವನಿಗೂ ಅನ್ಯಾಯವಾದರು ನ್ಯಾಯ ಮರೀಚಿಕೆಯಾಗುವ ಹಂತದಲ್ಲಿದ್ದರೆ ಎಸ್‌ಡಿಪಿಐ ಹೋರಾಟದ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ , ವಿಧಾನಸಭಾ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಉಪಸ್ಥಿತರಿದ್ದರು. ಅಶ್ರಫ್ ಚಾರ್ಮಾಡಿ ತಂಡ ಹೋರಾಟದ ಘೋಷಣೆ ಮೊಳಗಿಸಿದರೆ, ರವೂಫ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.










