



ಉಜಿರೆ, ಮಾರ್ಚ್ 25: ಉಜಿರೆಯ ಎಸ್.ಡಿ.ಎಂ ಕಾಲೇಜು ಡಿ.ರತ್ನವರ್ಮ ಹೆಗಡೆ ಸ್ಮರಣಾರ್ಥ ‘ಆಧುನಿಕತಂತ್ರಜ್ಞಾನ ಸಾಂಸ್ಕೃತಿಕ ಪರಂಪರೆಗೆ ಪೂರಕ/ಮಾರಕ’ ಕುರಿತು ಮಂಗಳವಾರ ಆಯೋಜಿಸಿದ್ದ ಮಂಗಳೂರು ವಿಶ್ವದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಯಲ್ಲಿ ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೀತಾ ಹಾಗೂ ನವ್ಯಶ್ರೀ ಯು ಪ್ರಥಮ ಸ್ಥಾನ ಗಳಿಸಿದ್ದಾರೆ.
ಉಜಿರೆ ಎಸ್ ಡಿ ಎಮ್ ಬಿ.ಎಡ್ ಕಾಲೇಜಿನ ಫಾತಿಮತ್ ರಜಿಯಾ ಹಾಗೂ ಯಶಸ್ ದ್ವಿತೀಯ ಸ್ಥಾನ ಪಡೆದರು. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಸಂದೀಪ್ ಜೆ ಸಮೈ ಅವರು ಉತ್ತಮ ಚರ್ಚೆಗೆ ವೈಯಕ್ತಿಕ ಬಹುಮಾನ ಪಡೆದರು.

ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಕೃಷ್ಣಾನಂದ ಪಿ ಎಂ, ಪದ್ಮರಾಜ್ ಎನ್, ಡಾ. ಮಾಧವಎಮ್ ಕೆ ಉಪಸ್ಥಿತರಿದ್ದರು.
ಪ್ರಥಮ ಬಹುಮಾನವಾಗಿ 10 ಸಾವಿರ ರೂ, ದ್ವಿತೀಯ ಬಹುಮಾನವಾಗಿ ಎಂಟು ಸಾವಿರರೂ ಮತ್ತು ವೈಯಕ್ತಿಕ ಬಹುಮಾನವಾಗಿ ಐದು ಸಾವಿರರೂಗಳನ್ನು ನೀಡಲಾಯಿತು. ಚರ್ಚಾ ಸ್ಪರ್ಧೆಯಲ್ಲಿ 15 ಕಾಲೇಜುಗಳ ತಲಾ ಇಬ್ಬರು ವಿದ್ಯಾರ್ಥಿಗಳು ತಂಡಗಳಾಗಿ ಭಾಗವಹಿಸಿದ್ದರು.
ಚರ್ಚೆಯಲ್ಲಿ ಭಾಗವಹಿಸಿದ್ದ ಕೆಲವು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದಿಂದ ಪ್ರಾದೇಶಿಕ ಆಚಾರ ವಿಚಾರ, ಕಲೆ, ಸಂಸ್ಕೃತಿ ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಳ್ಳುತ್ತಿರುವುದನ್ನು ಗುರುತಿಸಿ ಪುರಾತನ ಸಂಸ್ಕೃತಿಗಳ ರಕ್ಷಣೆ ಸಾಧ್ಯವಾಗಿರುವುದರ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಇನ್ನು ಕೆಲವು ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಕಾರಣದಿಂದಾಗಿ ಜನರಲ್ಲಿ ಭಕ್ತಿ, ಭಾವನೆಗಳು ಕಡಿಮೆ ಆಗುತ್ತಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದರು. ಪಾಶ್ಚಾತ್ಯ ಸಂಸ್ಕೃತಿಯು ಆವರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾರಂಪರಿಕ ಆಹಾರ ಪದ್ಧತಿಗಳು ಮಾನ್ಯತೆ ಕಳೆದುಕೊಳ್ಳುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
