ಬೆಳ್ತಂಗಡಿ; ಶತಮಾನಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಬದುಕನ್ನು ನಡೆಸುತ್ತಿತುವ ಬೆಳ್ತಂಗಡಿ ತಾಲೂಕಿನ ಆದಿವಾಸಿ ಸಮುದಾಯದ ಕುಟುಂಬಗಳಿಗೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ರಸ್ತೆ , ವಿದ್ಯುತ್ ಇಲ್ಲದೆ ಆದಿವಾಸಿಗಳು ವಾಸಿಸುತ್ತಿದ್ದಾರೆ. ರಸ್ತೆ ಇಲ್ಲದೆ ಹತ್ತಾರು ಕಿಮೀ ನಡೆದುಕೊಂಡೇ ನದಿ , ಹಳ್ಳ , ತೊರೆಗಳನ್ನು ದಾಟಿ ಹೋಗಬೇಕಾಗಿದೆ ಎಂದು ಸಮಸ್ಯೆಯ ಗಂಭೀರತೆಯನ್ನು ಮುಖ್ಯಮಂತ್ರಿಗಳ ಗಮನ ಸೆಳೆದರು. ಜೊತೆಗೆ ಇತರ ಆದಿವಾಸಿ ಕಾಲನಿಗಳೂ ಮೂಲಭೂತ ಸೌಕರ್ಯ ವಂಚಿತವಾಗಿದೆ. ಇದಕ್ಕಾಗಿ ವಿಶೇಷ ಅನುದಾನವನ್ನು ಬೆಳ್ತಂಗಡಿ ತಾಲೂಕಿಗೆ ಬಿಡುಗಡೆ ಮಾಡಲು ವಿನಂತಿಸಿದರು. ಇದೇ ಸಂದರ್ಭದಲ್ಲಿ ಈಗಾಗಲೇ ರಾಜ್ಯದ ಆದಿವಾಸಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ಅಭಿನಂದನೆ ಸಲ್ಲಿಸಿದರು.