ಬೆಳ್ತಂಗಡಿ;”ಬಾಂಗ್ಲಾದೇಶದಲ್ಲಿ ಹಾಸಿಗೆ ದಿಂಬು ಹಿಡಿದುಕೊಂಡು ಓಡಿದ ಪ್ರಸಂಗ ಭಾರತದ ಪ್ರಧಾನಿಯವರಿಗೂ ಅತಿ ಶೀಘ್ರ ಬರಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿಯಲ್ಲಿ ಸೋಮವಾರ ನಡೆದ ಪುಂಜಾಲಕಟ್ಟೆ- ಚಾರ್ಮಾಡಿ ಹಿತರಕ್ಷಣ ಸಮಿತಿಯ ಜನಾಗ್ರಹ ಸಭೆಯಲ್ಲಿ ಹೇಳಿರುವುದು ಖಂಡನೀಯ” ಎಂದು ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಶ್ರೀನಿವಾಸರಾವ್ ಹೇಳಿದರು.
ಅವರು ಮಂಗಳವಾರ ಗುರುವಾಯನಕೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಇಂತಹ ಹೇಳಿಕೆಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದರ ಜತೆ ದೇಶದ ಶಾಂತಿ ಕದಡಲು ಕಾರಣವಾಗುತ್ತದೆ” ಎಂದರು.
ಶಾಸಕ ಹರೀಶ್ ಪೂಂಜಾ ಅವರ ಕುರಿತು ಭ್ರಷ್ಟಾಚಾರ ಆರೋಪ ಮಾಡಿದ ಬಗ್ಗೆ ಈಗಾಗಲೇ ಮಾರಿಗುಡಿಯಲ್ಲಿ ಪ್ರಮಾಣ ಮಾಡಲಾಗಿದೆ ಇನ್ನೊಮ್ಮೆ ರಕ್ಷಿತ್ ಅವರು ನಿಗದಿ ಪಡಿಸಿದಲ್ಲಿಗೆ ಶಾಸಕರು ಪ್ರಮಾಣಕ್ಕೆ ಬರಲು ಸಿದ್ಧ. 3 ಕೋಟಿ ರೂ. ಕಿಕ್ ಬ್ಯಾಂಕ್ ಹೆದ್ದಾರಿ ಕಾಮಗಾರಿಯಲ್ಲಿ ಪಡೆಯಲಾಗಿದೆ, ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂಬ ವಿಚಾರಗಳನ್ನು ಯಾವುದೇ ಸಾಕ್ಷಾಧಾರ ಗಳಿಲ್ಲದೆ ಹೇಳುತ್ತಿರುವುದು ಅಕ್ಷಮ್ಯ ಎಂದರು.
ಕಾನೂನಾತ್ಮಕವಾಗಿ ಸಂವಿಧಾನಾತ್ಮಕವಾಗಿ ತೀರ್ಮಾನ ಕೈಗೊಂಡ ರಾಜ್ಯಪಾಲರಿಗೆ ಅವಮಾನ ಮಾಡಲಾಗಿದೆ, ಶಾಸಕರ ಪತ್ನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗಿದೆ, ಬಿಜೆಪಿಯನ್ನು ಭಿಕ್ಷುಕರ ಜನತಾ ಪಾರ್ಟಿ ಎಂದು ಕೀಳುಮಟ್ಟದ ಹೇಳಿಕೆ ನೀಡಿರುವುದು ವಿಷಾದನೀಯ” ಎಂದರು.
“ಈ ಬಾರಿ ತಾಲೂಕಿಗೆ ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲ ರಾಜ್ಯ ಹೆದ್ದಾರಿ, ಗ್ರಾಮೀಣ ರಸ್ತೆ, ಶಾಲೆಗಳ ಕುರಿತು ರಾಜ್ಯ ಸರಕಾರ ಗಮನಹರಿಸಿ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮುಗೆರೋಡಿ ಕಂಪೆನಿಗೆ ನೀಡಲಾಗಿದೆ ಎಂದು ತಿಳಿಸಿದ ಅವರು ಈ ಬಗೆಗಿನ ಹೆಚ್ಚಿನ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲು ಮುಂದಾಗಲಿಲ್ಲ.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ ಹಾಗೂ ಪ್ರಶಾಂತ ಪಾರೆಂಕಿ ಉಪಸ್ಥಿತರಿದ್ದರು.