Home ಸ್ಥಳೀಯ ಸಮಾಚಾರ ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ ಕಾರ್ಯಕ್ರಮ

ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ ಕಾರ್ಯಕ್ರಮ

94
0

ಬೆಳ್ತಂಗಡಿ:ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರು ಮನ, ವಚನ, ಕಾಯದಿಂದ ದೃಢ ಸಂಕಲ್ಪ ಮಾಡಿ ಮುಂದೆ ಸಾರ್ಥಕ ಜೀವನ ನಡೆಸುವ ಪ್ರಯತ್ನ ನಡೆಸಬೇಕು, ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಪರಿಶುದ್ಧರಾಗಿ ದೇವರ ದರ್ಶನ ಮಾಡಿ ಅನುಗ್ರಹ ಪಡೆದು ಮುಂದೆ ಸುಖ-ಶಾಂತಿ, ನೆಮ್ಮದಿಯ ಕೌಟುಂಬಿಕ ಜೀವನ ನಡೆಸಲು ಪ್ರಯತ್ನಿಸಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮದ್ಯವ್ಯಸನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರ ಶತದಿನೋತ್ಸವದ ಸಂಭ್ರಮದ ನವಜೀವನೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವ್ಯಸನಮುಕ್ತರ ಭಾಗ್ಯದ ಬಾಗಿಲು ತೆರೆದಿದೆ ಅದನ್ನು ಜೀವನ ಪರ್ಯಂತ ಉಳಿಸಿಕೊಳ್ಳಿ ದುಶ್ಚಟಗಳೇ ನಮ್ಮ ಸಮಸ್ಯೆಗಳಿಗೆ ಮೂಲ ಕಾರಣವಾಗುತ್ತಿದೆ ಈ ಬಗ್ಗೆ ಸದಾ ಎಚ್ಚರಿಕೆಯಿಂದಿರಿ ಎಂದು ಅವರು ಸಲಹೆ ನೀಡಿದರು. ತುಮಕೂರಿನ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಆಶೀರ್ವಚನ ನೀಡಿ.
ಮದ್ಯಪಾನದಂತಹ ವ್ಯಸನಗಳಿಗೆ ಬಿದ್ದವರನ್ನು ಮತ್ತು ಬೀಳುತ್ತಿರುವವರನ್ನು ಎತ್ತಿ ಹಿಡಿಯುವುದೇ ನಿಜವಾದ ಧರ್ಮವಾಗಿದೆ. “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎನ್ನುವಂತೆ ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯವಾಗಬೇಕು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾತಾ-ಪಿತರಂತೆ ಬಹಳ ಪ್ರೀತಿ-ವಿಶ್ವಾಸದಿಂದ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಮಾಡುತ್ತಿರುವ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ ಇದರ ಪ್ರಯೋಜನ ಪಡೆದುಕೊಂಡು ಮದ್ಯಮುಕ್ತರಾದವರು ಇಂದಿನಿಂದ ಹೊಸ ಬದುಕನ್ನು ಆರಂಭಿಸುವಂತೆ ಅವರು ಕರೆ ನೀಡಿದರು.

ಸಮಾರಂಭದಲ್ಲಿಮಾಜಿ ವಿಧಾನಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಶುಭಾಶಂಸನೆ ಮಾಡಿ ರಾಷ್ಟ್ರಪಿತ ಮಹಾತ್ಮ್ಮಾ ಗಾಂಧೀಜಿ ಕನಸು ಕಂಡ ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಹಾಗೂ ವ್ಯಸನಮುಕ್ತ ಭಾರತವನ್ನು ಕಟ್ಟುವ ಕಾರ್ಯವನ್ನು ಹೆಗ್ಗಡೆಯವರು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿದ್ದಾರೆ ಎದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ಡಾ. ಅಭಿಷೇಕ್ ಚತುರ್ವೇದಿ ಮತ್ತು ದೇರಳೆಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಮೇಖಲಾ ದಿವಾಕರ್ ಅವರು ಮದ್ಯವರ್ಜನ ಶಿಬಿರಗಳ ಬಗ್ಗೆ ರಚಿಸಿದ ಸಂಶೋಧನಾ ಪ್ರಬಂಧಗಳನ್ನು ಡಿ. ವೀರೇಂದ್ರ ಹೆಗಡೆಯವರಿಗೆ ಅರ್ಪಿಸಿದರು.
ಮಂಗಳೂರಿನ ಡಾ. ಶ್ರೀನಿವಾಸ ಭಟ್, ಎಸ್. ಡಿ. ಸಂಪತ್ ಸಾಮ್ರಾಜ್ಯ, ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಅಧಿಕಾರಿ ದುಗ್ಗೇಗೌಡ, ಜಿಲ್ಲಾಧ್ಯಕ್ಷ ಪದ್ಮನಾಭ ಭಟ್, ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್, ಕಾಸಿಂ ಮಲ್ಲಿಗೆಮನೆ ಮೊದಲಾದವರು ಉಪಸ್ಥಿತರಿದ್ದರು.
ವಿವೇಕ್ ವಿ. ಪಾಯಸ್ , ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಧನ್ಯವಾದವಿತ್ತರು.
ಯೋಜನಾಧಿಕಾರಿಗಳಾದ ನಾಗೇಶ್ ಮತ್ತು ಭಾಸ್ಕರ್, ಎನ್. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here