ಬೆಳ್ತಂಗಡಿ; ಶಿರಾಡಿ ಘಾಟಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಂಗಳೂರಿನ ತಾಯಿ ಮಗ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೆ ಈಡಾಗಿದೆ. ಕಾರಿನಲ್ಲಿದ್ದ ತಾಯಿ-ಮಗ ಮೃತಪಟ್ಟುದ್ದಾರೆ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬಿರ್ ಎಂಬವರ ಪತ್ನಿ ಸಫಿಯಾ(50), ಹಾಗೂ
ಮಗ ಮೊಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಕಾರು ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪಿಸುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಮೂವರು ಮಕ್ಕಳು ಕೂಡಾ ಇದ್ದು ಅವರಿಗೂ ಕೂಡ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟಿರುವ ಶಫೀಕ್ ಕಾರು ಚಲಾಯಿಸುತ್ತಿದ್ದರು. ಇವರು ಮಂಗಳೂರಿನ ಕೊಣಾಜೆಯ ಪಿ ಎ ಇಂಜಿನಿಯರಿಂಗ್ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇವರ ತಾಯಿ ಸಫಿಯಾ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.