ಬೆಳ್ತಂಗಡಿ:ಪೊಲೀಸರಿಗೆ ಹೆದರುವವರು ನಾವಲ್ಲ ಬಿಜೆಪಿಯ
ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಪೋಲೀಸ್ ಠಾಣೆಗೆ ನುಗ್ಗಿ ಪೊಲೀಸರ ಕಾಲರ್ ಹಿಡಿಯಲೂ ಸಿದ್ದನಾಗಿದ್ದೇನೆ, ನನ್ನ ಮೇಲೆ ಎರಡು ಬಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದೀರಿ ತಾಕತ್ತಿದ್ದರೆ ಬಂಧಿಸಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸ್ ಇಲಾಖೆಗೆ ಸವಾಲು ಹಾಕಿದರು.
ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ವಿರೋಧಿಸಿ ಶಾಸಕ ಹರೀಶ್ ಪೂಂಜ ಅವರ ವಿರುದ್ದ ಪ್ರಕರಣ ದಾಖಲಿಸಿದನ್ನು ವಿರೋಧಿಸಿ ಬೆಳ್ತಂಗಡಿ ಬೆಜೆಪಿ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಇಂತಹ ಕಾರ್ಯ ಮಾಡಲು ಮುಂದಾದರೆ ಅಂದು ಡಿಜೆ ಹಳ್ಳಿ ಕೆ.ಜೆ ಹಳ್ಳಿಯಲ್ಲಿ ಏನು ಮಾಡಿದರೋ ಅದನ್ನು ಬೆಳ್ತಂಗಡಿಯಲ್ಲಿಯೂ ನಿರ್ಮಾಣ ಮಾಡುವ ಕಾರ್ಯ ಮಾಡುತ್ತೇವೆ ಎಂದು ಅವರು ಸವಾಲು ಹಾಕಿದರು.
ಕಲ್ಲಿನ ಕೋರೆ ಮಾಡುತ್ತಿದ್ದ ಪ್ರಮೋದ್ ತಪ್ಪುಮಾಡಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಿ ಎಂದ ಶಾಸಕರು, ಪ್ರಮೋದ್ ಹಪ್ತಾ ನೀಡಲಿಲ್ಲ ಎಂದು ದಾಳಿ ಮಾಡಲಾಗಿದೆ ಶಶಿರಾಜ್ ಶೆಟ್ಟಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ಅವರನ್ನು ಇದರಲ್ಲಿ ಸಿಲುಕಿಸಲಾಗಿದೆ ಎಂದರು.
ನಾಳೆಯಿಂದ ತಾಲೂಕಿನಲ್ಲಿರುವ ಅಕ್ರಮ ಮರಳುಗಣಿಗಾರಿಕೆ, ಅಕ್ರಮ ಕಲ್ಲುಗಣಿಗಾರಿಕೆ ಸೇರಿದಂತೆ ಎಲ್ಲ ಅಕ್ರಮಗಳ ವಿರುದ್ದ ಪಕ್ಷಾತೀತವಾಗಿ ದಾಳಿ ನಡೆಸಿ ಕ್ರಮಕೈಗೊಳ್ಳಿ ಎಂದ ಶಾಸಕರು
ಒಂದು ವಾರದಲ್ಲಿ ತಾಲೂಕಿನಲ್ಲಿರುವ ಅಕ್ರಮ ವ್ಯವಹಾರಗಳು ನಿಲ್ಲದಿದ್ದಲ್ಲಿ ತಾನೇ ಮುಂದು ನಿಂತು ಅದರ ವಿದುದ್ದ ದಾಳಿಮಾಡುವುದಾಗಿ ತಿಳಿಸಿದರು. ಯಾವುದೇ ಅಕ್ರಮವನ್ನು ಪತ್ತೆ ಹಚ್ಚಿದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಮ್ಮ ಭಾಷಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರಿ ಸೇರಿದಂತೆ ಪೊಲೀಸ್ ಇಲಾಖೆಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಶಾಸಕರು ಎಲ್ಲರೂ ಕಾಂಗ್ರೆಸ್ ಏಜೆಂಟರುಗಳಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಪೊಲೀಸರು ಕಂದಾಯ ಇಲಾಖೆ ಕಾಂಗ್ರೆಸ್ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದೆ. ನಿರಪರಾಧಿಗಳನ್ನು ಬಂಧಿಸುವ ಕಾರ್ಯವನ್ನು ಮಾಡಿದ ಪೊಲೀಸರು ಕೂಡಲೇ ಇದನ್ನು ತಿದ್ದಿಕೊಳ್ಳಬೇಕು.
ಶಾಸಕ ಹರೀಶ್ ಪೂಂಜ ಅವರ ವಿರುದ್ದ ದಾಖಲಾಗಿರುವ ಪ್ರಕರಣವನ್ನು 24ಗಂಟೆಯೊಳಗೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬ್ರಿಜೇಶ್ ಚೌಟ, ಹರಿಕೃಷ್ಣ ಬಂಟ್ವಾಳ, ಜಯಂತ ಕೋಟ್ಯಾನ್, ಶ್ರೀನಿವಾಸ ರಾವ್, ಪ್ರಶಾಂತ ಪಾರಂಕಿ, ಜಯಾನಂದ ಗೌಡ ಹಾಗೂ ಇತರರು ಇದ್ದರು.
ಬೆಳ್ತಂಗಡಿ ತಾಲೂಕು ಕಚೇರಿಯ ಮುಂದೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿ ಎಂ ಬ್ಯಾನರ್ ಅನ್ನು ಅಂಟಿಸಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು
ಬಂಗೇರರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ
ವಸಂತ ಬಂಗೇರರು ತಾಲೂಕು ಕಚೇರಿಯ ಮುಂದೆ ಯಾವೆಲ್ಲ ಶಬ್ದ ಉಪಯೋಗಿಸಿ ಬೈದರೂ ಅವರ ಮೇಲೆ ಒಂದು ಪ್ರಕರರಣ ದಾಖಲಿಸಿರಲಿಲ್ಲ. ನಾನು ಪೊಲೀಸ್ ಠಾಣೆ ನಿನ್ನದಾ ನಿನ್ನ ಅಪ್ಪಂದಾ ಎಂದು ಕೇಳಿದ್ದಕ್ಕೆ ಕೇಸ್ ದಾಖಲಿಸಿದ್ಧಾರೆ ಕಾರ್ಯಕರ್ತನಿಗೆ ಅನ್ಯಾಯಮಾಡಿ ಪ್ರಕರಣ ದಾಖಲಿಸಿದಾಗ ಇನ್ನೇನು ಮಾಡಬೇಕಿತ್ತು
ಹರೀಶ್ ಪೂಂಜ
ಬೆಳ್ತಂಗಡಿ ಶಾಸಕ