ಬೆಳ್ತಂಗಡಿ: (ಅ-24) ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ಅಂಗಡಿಗಳಿಗೆ ಮಳೆನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಹಳೆಯ ಚರಂಡಿಗಳನ್ನು ಮುಚ್ಚಲಾಗಿದ್ದು, ಪರ್ಯಾಯ ಚರಂಡಿ ವ್ಯವಸ್ಥೆ ಕಲ್ಪಿಸದ ಪರಿಣಾಮ ಮಳೆನೀರು ರಸ್ತೆಯಲ್ಲಿ ಹರಿದು ಅಂಗಡಿಗಳಿಗೆ ನುಗ್ಗಿದೆ.
ಸೋಜಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ಸ್ ಮಳಿಗೆಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. ಅಪಾರ ನಷ್ಟದಿಂದ ಮಳಿಗೆ ಮಾಲಕರು ಕಣ್ಣೀರಿಟ್ಟಿದ್ದಾರೆ.
ಘಟನೆ ನಡೆದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಖಂಡನೀಯ ಎಂದು SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ತಿಳಿಸಿದ್ದಾರೆ.
ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಸೂಕ್ತ ನಷ್ಟ ಪರಿಹಾರವನ್ನು ತುರ್ತಾಗಿ ಒದಗಿಸಬೇಕು. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗಲು ಶಾಶ್ವತ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಕೂಡಲೇ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಾಂತರ ಮರುಕಳಿಸದಂತೆ ಕಾಮಗಾರಿ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನವಾಝ್ ಕಟ್ಟೆ ಆಗ್ರಹಿಸಿದ್ದಾರೆ











