ಬೆಳ್ತಂಗಡಿ: ಆರಂಬೋಡಿ ಗ್ರಾಮದ ಅಜ್ಜಿಬೆಟ್ಟು ಆನೆದೋಡಿ ಎಂಬಲ್ಲಿ ಅ. 5ರಂದು ಮುಂಜಾನೆ ಸಿಡಿಲು ಬಡಿದು ಮನೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಅಜ್ಜಿಬೆಟ್ಟು ಆನೆದೋಡಿ ನಿವಾಸಿ ನಾಗೇಶ್ ಕುಲಾಲ್ ಅವರ ಮನೆಗೆ ಮುಂಜಾನೆ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಮನೆಯ ಕಟ್ಟಡ ಹಾಗೂ ಮನೆಯೊಳಗಿನ ವಸ್ತುಗಳಿಗೆ ಹಾನಿಯಾಗಿದ್ದು, ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.ಶೀಟ್ ಗಳು ಪುಡಿಪುಡಿಯಾಗಿದೆ, ಎಂದು ತಿಳಿದುಬಂದಿದೆ.
ಘಟನೆಯಲ್ಲಿ ನಾಗೇಶ್ ಕುಲಾಲ್ ಅವರ ಪತ್ನಿ ಕುಸಲಾಕ್ಷಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









