ಬೆಳ್ತಂಗಡಿ, ಅ.3: SIR ಪ್ರಕ್ರಿಯೆಯಡಿ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಪಟ್ಟಣ ಪಂಚಾಯತ್, ಉಜಿರೆ, ಕಾಶಿಪಟ್ನ ಪೆರಾಡಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಸಲ್ಲಿಕೆಯಾಗಿರುವ ಫಾರಂ -7 ಅರ್ಜಿಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ತಹಶೀಲ್ದಾರ್‌ಗೆ ದೂರು ಸಲ್ಲಿಸಲಾಯಿತು.
Form-7 ಅರ್ಜಿಗಳ ಸಲ್ಲಿಕೆ ಹಾಗೂ ಪರಿಶೀಲನಾ ಪ್ರಕ್ರಿಯೆಯಲ್ಲಿ ಯಾವುದೇ ನಿಯಮಬಾಹಿರತೆ ನಡೆದಿದೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಬೇಕು. ಅರ್ಜಿದಾರರ ವಿವರಗಳು, ಮತದಾರರ ಅನುಮತಿ ಹಾಗೂ ಅರ್ಜಿಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು SDPI ದೂರಿನಲ್ಲಿ ಒತ್ತಾಯಿಸಿದೆ.
ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಆತುರದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. Form-7 ಅರ್ಜಿಗಳ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಮತದಾರರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.
ಸುಳ್ಳು ಮಾಹಿತಿ ಅಥವಾ ಅಕ್ರಮ ವಿಧಾನಗಳ ಮೂಲಕ ಅರ್ಜಿಗಳನ್ನು ಸಲ್ಲಿಸಿರುವುದು ತನಿಖೆಯಲ್ಲಿ ದೃಢಪಟ್ಟಲ್ಲಿ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು ಎಂದು SDPI ಒತ್ತಾಯಿಸಿದೆ.
Form-7 ಮೂಲಕ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಪ್ರಕ್ರಿಯೆ ಚುನಾವಣಾ ಆಯೋಗದ ನಿಗದಿತ ನಿಯಮಗಳಂತೆ ನಡೆಯಬೇಕಾಗಿದ್ದು, ಅರ್ಜಿಗಳ ಸತ್ಯಾಸತ್ಯತೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸುವುದು ಚುನಾವಣಾ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು SDPI ತಿಳಿಸಿದೆ.
ಈ ಸಂದರ್ಭದಲ್ಲಿ SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಕ್ಷೇತ್ರ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಸಮಿತಿ ಸದಸ್ಯ ಅಶ್ರಫ್ ಕಟ್ಟೆ ಹಾಗೂ ಲಾಯಿಲ ಬ್ಲಾಕ್ ಅಧ್ಯಕ್ಷ ಸಲೀಂ ಲಾಯಿಲ ಉಪಸ್ಥಿತರಿದ್ದರು.










