ಬೆಳ್ತಂಗಡಿ;: ಪ್ರಜಾಸೇವಾ ಇಲಾಖೆಯನ್ನು ಹೊಸದಾಗಿ ಪರಿಚಯಿಸುವ ಮೂಲಕ ಸರಕಾರವನ್ನೇ ರಾಜ್ಯದ ಜನಸಾಮಾನ್ಯರ ಮನೆ-ಬಾಗಿಲಿಗೆ ಕೊಂಡೊಯ್ದು ದೂರು, ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಡಿ ಸ್ಥಳದಲ್ಲೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ಹೊಸ ಆಂದೋಲನ ಆರಂಭಿಸಲಾಗಿದ್ದು
ಬೆಳ್ತಂಗಡಿ ತಾಲೂಕು ಮಟ್ಟದ ವೇಣೂರು ಹೋಬಳಿಯ ಪ್ರಜಾಸೇವಾ ಆಂದೋಲನ ಸಭೆಯು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಸೆ.5ರಂದು ಬೆಳಗ್ಗೆ ವೇಣೂರು ಭರತೇಶ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯನ್ನು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕಿನ ಜನತೆಗೆ ಈ ಕಾರ್ಯಕ್ರಮ ಹೊಸದೇನಲ್ಲ. ಜನಸ್ಪಂದನ ಕಾರ್ಯಕ್ರಮದ ಮೂಲಕ ಅಧಿಕಾರಿಗಳನ್ನು ಪ್ರತಿ ಗ್ರಾಮಕ್ಕೆ ಕರೆತಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಈಗಾಗಲೇ ಮಾಡಿದ್ದೇವೆ. ಪ್ರಜಾಸೇವೆಯೂ ಅತ್ಯಂತ ಉತ್ತಮ ಕಲ್ಪನೆಯಾಗಿದ್ದು, ಜನರ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸಿಗುತ್ತದೆ. ಜನರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಅಧಿಕಾರಿಗಳಿಂದ ಆಗಬೇಕು ಎಂದು ಸೂಚನೆ ನೀಡಿದರು.
ವೇದಿಕೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್ ನರಗುಂದ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿಎಸ್ ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಇಲಾಖೆ ಮಾಹಿತಿ ನೀಡಿದರು. ವೇಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹೇಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.












