Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ಲಾಯಿಲ ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ತೆರವಿಗೆ ತಹಶೀಲ್ದಾರ್ ಆದೇಶ

ಬೆಳ್ತಂಗಡಿ : ಲಾಯಿಲ ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ತೆರವಿಗೆ ತಹಶೀಲ್ದಾರ್ ಆದೇಶ

0
2

ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿ ನೇತಾಜಿ ಬಡಾವಣೆ ಪಕ್ಕದಲ್ಲಿ ಗ್ರಂಥಾಲಯಕ್ಕೆ ಮೀಸಲಿರಿಸಿದ್ದ ಸರ್ಕಾರಿ ಜಾಗ 116/1 ರಲ್ಲಿ 0.05 ಎಕ್ರರೆಯಲ್ಲಿ ನಿರ್ಮಿಸಲಾಗುತ್ತಿರುವ ಅನಧಿಕೃತ ಕಟ್ಟಡ ತೆರವಿಗೆ ಬೆಳ್ತಂಗಡಿ ತಹಶೀಲ್ದಾರ್ ಆದೇಶಿಸಿದ್ದು,ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ನೋಟೀಸ್ ಅಂಟಿಸಿದ್ದಾರೆ.

ಲಾಯಿಲ ಗ್ರಾಮದ ನಿವಾಸಿಗಳಾದ ಸೂರಪ್ಪ ಹಾಗೂ ರಾಜು ಮೇಸ್ತ್ರಿ ಅವರಿಬ್ಬರಿಗೂ ನಿರ್ಮಿಸುತ್ತಿರುವ ಕಟ್ಟಡ ಕಾನೂನು ಬಾಹಿರವಾಗಿದ್ದು ಜಾಗಾತಿಕ್ರಮಣ‌ ತೆರವುಗೊಳಿಸಲು ತಹಶೀಲ್ದಾರ್ ಆದೇಶಿಸಿದ್ದು ಅದಂತೆ‌ಇದೀಗ ಅಕ್ರಮ ಕಟ್ಟಡಕ್ಕೆ ನೋಟೀಸ್‌ ಅಂಟಿಸಲಾಗಿದೆ.
ಪಡ್ಲಾಡಿ ಬಳಿ ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿಗಳಿಲ್ಲದೆ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕಳೆದ ಕೆಲವು ಸಮಯಗಳಿಂದ ಕೇಳಿಬಂದ ಬಗ್ಗೆ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಿಸುವ ಉದ್ದೇಶ ಹೊಂದಿದ್ದ ಜಾಗದಲ್ಲಿ ಇದೀಗ ಮತ್ತೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಮತ್ತಷ್ಟು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿತ್ತು ಈ ಬಗ್ಗೆ ತಹಶೀಲ್ದಾರ್ ಅವರಿಗೆ ದೂರುಗಳು ಸಲ್ಲಿಕೆಯಾಗಿತ್ತು.
ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿ ಅವರು ಆ.24 ರಂದು ಬೆಳಗ್ಗೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಬಳಿಕ ಗ್ರಾಮಪಂಚಾಯತಿನಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದಾಗ ಗ್ರಂಥಾಲಯಕ್ಕೆ ಮೀಸಲಿರಿಸಲಾಗಿದ್ದ ಜಾಗದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಕಟ್ಟಡ ನಿರ್ಮಿಸುತ್ತಿರುವುದು ಸ್ಪಷ್ಟಗೊಂಡಿದ್ದು ಕಟ್ಟಡ ತೆರವುಗೊಳಿಸುವಂತೆ ಬೆಳ್ತಂಗಡಿ ತಹಶೀಲ್ದಾರ್ ಕಚೇರಿಯಿಂದ ಸೆ.3 ರಂದು ನೋಟೀಸ್ ಆದೇಶ ನೀಡಿದ್ದಾರೆ. ಅಧಿಕಾರಿಗಳು ಸೆ.4 ರಂದು ಸ್ಥಳಕ್ಕೆ ತೆರಳಿದಾಗ ಸೂರಪ್ಪ ಅವರು ಸ್ಥಳಕ್ಕೆ ಬಾರದೆ ಇದ್ದಾಗ ಕಟ್ಟಡದ ಬಾಗಿಲಿಗೆ ನೋಟೀಸ್ ಅಂಟಿಸಿದ್ದಾರೆ. ಸ್ಥಳಕ್ಕೆ ಬಂದ ರಾಜು ಮೇಸ್ತ್ರಿ ಅವರ ಮಗ ಸುರೇಶ್  ಕಟ್ಟಡವನ್ನು ನಾವೇ ಕಟ್ಟಿದ್ದಾಗಿ ಹೇಳಿ ಮೂರು ದಿನಗಳೊಳಗೆ ನಾವೇ ಸಂಪೂರ್ಣ ಮನೆಯನ್ನು ತೆರವುಗೊಳಿಸುವುದಾಗಿ ಅಧಿಕಾರಿಗಳಲ್ಲಿ ಲಿಖಿತ ಹೇಳಿಕೆಯಲ್ಲಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಸೋಮವಾರದವರೆಗೆ ಕಾಲಾವಕಾಶ ನೀಡಿರುವುದಾಗಿ ತಿಳಿದು ಬಂದಿದೆ.
ಕಟ್ಟಡ ತೆರವುಗೊಳಿಸದಿದ್ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಮನೆಯನ್ನು ತೆರವು ಮಾಡಿ ಸರಕಾರಿ ಜಾಗವನ್ನು ಲಾಯಿಲ ಗ್ರಾಮ ಪಂಚಾಯತ್ ಗ್ರಂಥಾಲಯ ನಿರ್ಮಿಸಲು ಹಸ್ತಾಂತರ ಮಾಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ಕಂದಾಯ ನಿರೀಕ್ಷಕ ರಾಜು ಲಮಾಣಿ, ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ತಾರಾನಾಥ್ ನಾಯ್ಕ್,ಲಾಯಿಲ ಗ್ರಾಮ ಆಡಳಿತ ಅಧಿಕಾರಿ ರನಿತಾ, ಲಾಯಿಲ ಗ್ರಾಮ ಸಹಾಯಕ ಸತೀಶ್ ಹಾಗೂ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ನೋಟೀಸ್ ಅಂಟಿಸುವ ಕಾರ್ಯ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here