
ಬೆಳ್ತಂಗಡಿ: ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಪ್ರಕರಣದಲ್ಲಿ ಆಟೋ ಚಾಲಕನಿಗೆ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ.
2022ರ ಏ. 12ರಂದು ರಾತ್ರಿ ಉಜಿರೆ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಬೆಳಾಲು ಕ್ರಾಸ್ ನಲ್ಲಿ ಈ ಅಪಘಾತ ಸಂಭವಿಸಿತ್ತು.
ನಾಲ್ಕು ಚಕ್ರದ
ಸ್ಕೂಟಿಯಲ್ಲಿ ಶ್ರೀನಿವಾಸ ಅವರು ಗಿರಿಜಾ ಹಾಗೂ ಗಣೇಶ್ ಅವರನ್ನು ಸಹ ಸವಾರರಾಗಿ ಕೂರಿಸಿಕೊಂಡು ಧರ್ಮಸ್ಥಳದತ್ತ ತೆರಳುತ್ತಿದ್ದರು. ಬೆಳಾಲು ರಸ್ತೆಗೆ ತಿರುಗಲು ಬಲ ಇಂಡಿಕೇಟರ್ ನೀಡಿ ತಿರುವು ಪಡೆಯುತ್ತಿದ್ದ ವೇಳೆ ಹಿಂದಿನಿಂದ ಬಂದ ಆಟೋರಿಕ್ಷಾ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಸ್ಕೂಟಿ ಸವಾರ ಶ್ರೀನಿವಾಸ ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಗಿರಿಜಾ ಅವರಿಗೆ ಕಣ್ಣಿನ ಮೇಲ್ಭಾಗ ಹಾಗೂ ಎಡ ಕೈಗೆ, ಗಣೇಶ್ ಅವರಿಗೆ ಎಡ ಕೈ ಮಣಿಕಟ್ಟಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ಆಗಿನ ಸಿಪಿಐ ಶಿವಕುಮಾರ್ ಹಾಗೂ ಪಿಎಸ್ ಐ ಓಡಿಯಪ್ಪ ಗೌಡ ನಡೆಸಿ, ಆರೋಪಿಯಾದ ಹಸೈನ್ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗೆ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಸಹಾಯಕ ಸರಕಾರಿ ಅಭಿಯೋಜಕಿ ಅಶಿತಾ ಎಂ.ಎ. ವಾದ ಮಂಡಿಸಿದ್ದು, ಠಾಣೆಯ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿ ಯೋಗೇಶ್ ಸಹಕರಿಸಿದ್ದರು.



