Home ಸ್ಥಳೀಯ ಸಮಾಚಾರ ಧರ್ಮಸ್ಥಳ ಮುಳಿಕ್ಕಾರಿನಲ್ಲಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ರಸ್ತೆಯ ಅವ್ಯವಸ್ಥೆ ಜನಪ್ರತಿನಿಧಿ , ಅಧಿಕಾರಿಗಳ ವಿರುದ್ದ ಆಕ್ರೋಶ

ಧರ್ಮಸ್ಥಳ ಮುಳಿಕ್ಕಾರಿನಲ್ಲಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ರಸ್ತೆಯ ಅವ್ಯವಸ್ಥೆ ಜನಪ್ರತಿನಿಧಿ , ಅಧಿಕಾರಿಗಳ ವಿರುದ್ದ ಆಕ್ರೋಶ

0
7

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಮುಳಿಕಾರು ಮಲೆಕುಡಿಯ ಕಾಲನಿಯ ಜನರು ರಸ್ತೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಿರಂತರ ಸಮಸ್ಯೆ ಎದುರಿಸುತ್ತಿದ್ದು ಇದೀಗ ತಮ್ಮ ಬೇಡಿಕೆ ಈಡೇರಿಸದಿದ್ದರೆ ಚುನಾವಣಾ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡಿದ್ದು ಚುನಾವಣೆ ಬಹಿಷ್ಕರಿಸುವುದಾಗಿ ಬ್ಯಾನರ್ ಅಳವಡಿಸಿದ್ದಾರೆ.

ಇಲ್ಲಿ 80 ಕ್ಕೂ ಹೆಚ್ಚು ಮಲೆಕುಡಿಯ ಸಮುದಾಯದ ಕುಟುಂಬಗಳು ತಲೆತಲಾಂತರಗಳಿಂದಲೂ ವಾಸಿಸುತ್ತಿದೆ. ಇಲ್ಲಿ ಇತರ ಜಾತಿಯ ಕುಟುಂಬಗಳೂ ಇವೆ. ಇಲ್ಲಿಯ ರಸ್ತೆ ಇಂದಿಗೂ ಪಕ್ಕಾ ಮಣ್ಣಿನ ರಸ್ತೆ. ರಸ್ತೆಯಲ್ಲಿ ಬಾರಿ ಗಾತ್ರದ ಕಲ್ಲುಗಳು , ಮರದ ಬೇರುಗಳು ಜೊತೆಗೆ ರಸ್ತೆ ಮಧ್ಯೆದಲ್ಲೇ ಪ್ರಕೃತಿ ರೂಪಿಸಿದ ತಾತ್ಕಾಲಿಕ ಚರಂಡಿ ಇದರಲ್ಲಿಯೇ ಜನ , ವಾಹನ ಸಂಚಾರ ನಡೆಸಬೇಕಾದ ಅನಿವಾರ್ಯತೆಯಿದೆ. ತುರ್ತು ಅಗತ್ಯಗಳಿಗೆ ಆಂಬುಲೆನ್ಸ್ ವಾಹನಗಳೂ ಕೂಡ ಇಲ್ಲಿ ಬರಲು ಒಪ್ಪಲ್ಲ ಅಂತಹ ದುಸ್ಥಿತಿಯ ರಸ್ತೆ ಇಲ್ಲಿಯದು.


ಈ ರಸ್ತೆಯು ಧರ್ಮಸ್ಥಳದಿಂದ ಕೊಲ್ಪೆ , ನೆಲ್ಲಿಕಟ್ಟೆ , ಮುಳಿಕ್ಕಾರು ಪ್ರದೇಶಕ್ಕೆ 5 ಕಿಮೀ , ಇಲ್ಲಿಂದ ಭೀಮಂಡೆ ಪ್ರದೇಶದ 6 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ಜನರು ನಡೆದುಕೊಂಡು ಹೋಗಲೂ ಕಷ್ಟಸಾಧ್ಯ.
ಈ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ಹಿಡಿದು ಜಿಲ್ಲಾ ಪಂಚಾಯತ್ ವರೆಗೂ , ಸಮಾಜ ಕಲ್ಯಾಣ ಇಲಾಖೆ , ಗಿರಿಜನ ಕಲ್ಯಾಣ ಇಲಾಖೆಯಿಂದಿಡಿದು ಸರ್ಕಾರದ ವರೆಗೂ , ಗ್ರಾಮ ಪಂಚಾಯತ್ ನ ಸದಸ್ಯನಿಂದ ತಾಲೂಕು , ಜಿಲ್ಲಾ ಪಂಚಾಯತ್ ಸದಸ್ಯರ ವರೆಗೂ , ಶಾಸಕ , ಸಂಸದರಿಗೂ ಮನವಿ ಮೇಲೆ ಮನವಿ ಸಲ್ಲಿಸಿದರೂ ಯಾರೂ ಇತ್ತ ಕಡೆಗೆ ತಲೆಯೂ ಹಾಕಿಲ್ಲ ಎನ್ನುವುದು ಇಲ್ಲಿನ ಜನರ ಆರೋಪವಾಗಿದೆ. ಅಧಿಕಾರಿಗಳು ಬಂದು ಹೋಗಿದ್ದು ಬಿಟ್ಟರೆ ಉಳಿದ ಯಾವುದೇ ಕೆಲಸವಾಗಿಲ್ಲ ಮನವಿ ನೀಡಿ ಸಾಕಾಗಿದೆ ಎಂದು ನೋವಿನಿಂದ ನುಡಿಯುತ್ತಾರೆ ಈ ಪ್ರದೇಶದ ಜನರು.

ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪ್ರದೇಶದ ಕೋಲ್ಪೆಯಿಂದ ನೆಲ್ಲಿಕಟ್ಟೆ ; ಪಿಜತಡ್ಕದಿಂದ ಭೀಮಂಡೆವರೆಗಿನ ರಸ್ತೆಯ ಅವ್ಯವಸ್ಥೆಯ ಸರಿ ಪಡಿಸಲು ಹೋರಾಟದ ಅಂತಿಮ ಭಾಗವಾಗಿ ಇದೀಗ ಚುನಾವಣಾ ಬಹಿಷ್ಕಾರ ಮಾಡಲು ಇಲ್ಲಿನ ಜನರು ನಿರ್ಧರಿಸಿದ್ದಾರೆ. ಭೀಮಂಡೆ ಪ್ರದೇಶದಲ್ಲಿ 26 , ಕೊಲ್ಪೆ 20 , ನೆಲ್ಲಿಕಟ್ಟೆ 15 , ಕುದ್ರಾಯ 3 ಮತ್ತು ಹೊಳೆಬದಿ 13 ಹೀಗೆ ಒಟ್ಟು 77 ಮಲೆಕುಡಿಯ ಸಮುದಾಯದ ಕುಟುಂಬಗಳು ಹಾಗೂ 75 ಕ್ಕೂ ಹೆಚ್ಚು ಇತರ ಕುಟುಂಬಗಳೂ ಸೇರಿ 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುವ ಈ ಪ್ರದೇಶದ ರಸ್ತೆಯ ಅಭಿವೃದ್ಧಿಗಾಗಿ ಈ ವರೆಗೂ ಜನಪ್ರತಿನಿಧಿಗಳು , ಅಧಿಕಾರಿಗಳು ಮುಂದಾಗದ ಹಿನ್ನಲೆಯಲ್ಲಿ ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ರಸ್ತೆ ಸರಿಪಡಿಸುವ ವರೆಗೆ ಮತದಾನವಿಲ್ಲ


ನಮ್ಮ ರಸ್ತೆಗೆ ಇನ್ನೂ ಡಾಮರು ಕಾಂಕ್ರೀಟ್ ಭಾಗ್ಯ ಬಂದಿಲ್ಲ ಬಾಡಿಗೆಗೆ ಒಂದು ಅಟೋ ರಿಕ್ಷಾವೂ ಇಲ್ಲಿಗೆ ಬರಲ್ಲ ಅತ್ಯಂತ ಅಪಾಯಕಾರಿ ರಸ್ತೆಯಲ್ಲಿ ನಾವು ಓಡಾಡುತ್ತಿದ್ದೇವೆ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನವಿ ನೀಡಿ ಸಾಕಾಗಿದೆ. ಅವರ ಆಶ್ವಾಸನೆಗಳು ಕೇಳಿ ಸಾಕಾಗಿದೆ ಅಂತಿಮವಾಗಿ ಚುನಾವಣಾ ಭಹಿಷ್ಕಾರ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ರಸ್ತೆ ಸರಿಪಡಿಸುವ ವರೆಗೆ ಮುಂದೆ ಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತೇವೆ
ಸುಂದರ ಮುಳಿಕಾರು
ಸ್ಥಳೀಯ ನಿವಾಸಿ

NO COMMENTS

LEAVE A REPLY

Please enter your comment!
Please enter your name here