

ಬೆಳ್ತಂಗಡಿ: ಉಪ್ಪಿನಂಗಡಿ ಸಮೀಪದ ವಳಾಲು ಟೋಲ್ ಗೇಟ್ನಲ್ಲಿ ಏಕಾಏಕಿ ಟೋಲ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತೀವ್ರವಾಗಿ ಖಂಡಿಸಿದ್ದಾರೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ ಈ ಟೋಲ್ ದರ ಏರಿಕೆಯ ವಿರುದ್ಧ ಏಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಕ್ಷಿತ್ ಶಿವರಾಂ, ವಳಾಲು ಟೋಲ್ ಗೇಟ್ನಲ್ಲಿ ವಾಹನ ಸವಾರರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೊಸ ನಾಲ್ಕು ಚಕ್ರದ ವಾಹನಗಳ ಖರೀದಿ ಸಮಯದಲ್ಲೇ ರಸ್ತೆ ತೆರಿಗೆ ವಸೂಲಿ ಮಾಡಲಾಗುತ್ತಿದ್ದರೂ, ರಸ್ತೆ ಬಳಕೆಯ ಹೆಸರಿನಲ್ಲಿ ಮತ್ತೆ ಮತ್ತೆ ಟೋಲ್ ಶುಲ್ಕ ಹೆಚ್ಚಿಸುತ್ತಿರುವುದು ಎಷ್ಟು ಸಮಂಜಸ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿಯಮಗಳ ಪ್ರಕಾರ ಎರಡು ಟೋಲ್ ಪ್ಲಾಜಾಗಳ ನಡುವೆ ನಿಗದಿತ ಅಂತರವಿರಬೇಕು. ಆದರೆ ಬ್ರಹ್ಮರಕೊಟ್ಲು ಟೋಲ್ ಗೇಟ್ನಿಂದ 35 ಕಿ.ಮೀ ಗಿಂತಲೂ ಕಡಿಮೆ (ಕೇವಲ 32 ಕಿ.ಮೀ) ಅಂತರದಲ್ಲಿ ವಳಾಲು ಟೋಲ್ ಆರಂಭಿಸಿ, ಎರಡೆರಡು ಬಾರಿ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಎಂದು ರಕ್ಷಿತ್ ಶಿವರಾಂ ದೂರಿದ್ದಾರೆ. ವಳಾಲು ಭಾಗದ ಸ್ಥಳೀಯರು ತಮ್ಮ ದೈನಂದಿನ ಚಟುವಟಿಕೆಗಳಾದ ಬ್ಯಾಂಕ್, ಸಹಕಾರಿ ಹಾಲು ಡಿಪೋ, ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ತೆರಳಲು ಪ್ರತಿನಿತ್ಯ ₹250 ವರೆಗೆ ಟೋಲ್ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಜನವಿರೋಧಿ ಟೋಲ್ ದರ ಏರಿಕೆಯ ವಿರುದ್ಧ ಧ್ವನಿ ಎತ್ತದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಟೀಕಿಸಿದ್ದಾರೆ. ಟೋಲ್ ದರ ಹೆಚ್ಚಿಸಿ ವಾಹನ ಸವಾರರಿಗೆ ಹೊರೆಯಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಶ್ನಿಸುವ ತಾಕತ್ತು ಶಾಸಕರಿಗಿದೆಯೇ ಎಂದು ರಕ್ಷಿತ್ ಶಿವರಾಂ ಸವಾಲು ಹಾಕಿದ್ದಾರೆ.
ವಳಾಲು ಟೋಲ್ ದರ ಏರಿಕೆಯನ್ನು ತಕ್ಷಣವೇ ಮರುಪರಿಶೀಲಿಸಿ, ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು.
ಟೋಲ್ ದರ ನಿಗದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಹಾಗೂ ಸ್ಥಳೀಯರಿಗೆ ವಿನಾಯಿತಿ ನೀಡಬೇಕು.
ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವುಗೊಳಿಸಬೇಕು ಮತ್ತು ಬೆಳ್ತಂಗಡಿ ತಾಲೂಕಿನ ಪಣಕಜೆಯಲ್ಲಿ ಉದ್ದೇಶಿತ ಟೋಲ್ ಗೇಟ್ ಯೋಜನೆಯನ್ನು ಕೈಬಿಡಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.









