Home ರಾಜಕೀಯ ಸಮಾಚಾರ ವಳಾಲಿನಲ್ಲಿ ಟೋಲ್ ಗೇಟ್ ಆರಂಭ; ಬಿ.ಎಂ ಭಟ್ ಖಂಡನೆ

ವಳಾಲಿನಲ್ಲಿ ಟೋಲ್ ಗೇಟ್ ಆರಂಭ; ಬಿ.ಎಂ ಭಟ್ ಖಂಡನೆ

3
0

ಬೆಳ್ತಂಗಡಿ;  ದ.ಕ. ಜಿಲ್ಲೆಯಲ್ಲಿಯೇ ಮತ್ತೊಂದು ಹೊಸ ಟೋಲ್ ಗೇಟ್, ಅದೂ ಕೂಡಾ ಕಿಲೋ ಮೀಟರ್ ಅಂತರ ನಿಯಮ ಉಲ್ಲಂಘಿಸಿ ವಳಾಲಿನಲ್ಲಿ ತೆರೆದಿರುವುದು ಮತ್ತು ದುಬಾರಿ ಹಣ ಲೂಟುತ್ತಿರುವುದು ಅತ್ಯಂತ ಖಂಡನೀಯವಾಗಿದ್ದು ಇದನ್ನು ತಡೆಯದಿದ್ದರೆ ರೈತರ ಮತ್ತು ಕಾರ್ಮಿಕರ ಹೋರಾಟ ಅನಿವಾರ್ಯ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ.ಎಂ.ಭಟ್ ಬೆಳ್ತಂಗಡಿ ಅವರು ಹೇಳಿಕೆಯಲ್ಲಿ ಖಂಡಿಸಿದ್ದಾರೆ.

ದ.ಕ. ಜಿಲ್ಲೆಯ ಈ ನಾಲ್ಕನೇ ಟೋಲ್ ಗೇಟ್ ಕಾರ್ಯಾರಂಭಿಸಿ ಸುಂಕ ಸಂಗ್ರಹ ಆರಂಭವಾಗಿದೆ. ಈ ಟೋಲ್ ಗೇಟಿಂದ 33 ಕಿ ಮೀ ಅಂತರದಲ್ಲಿರುವ ಬಿ ಸಿ ರೋಡ್ ನ ಬ್ರಹ್ಮರ ಕೂಟ್ಲುವಿನ ಅಕ್ರಮ ಟೋಲ್ ಗೇಟ್ ಮುಚ್ಚಬೇಕು ಎಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನ ಮನಸ್ಕರು‌ ನಿರಂತರ ಹೋರಾಟ ನಡೆಸುತ್ತನೇ ಇದ್ದೇವೆ. ಅಷ್ಟರಲ್ಲಿ ಆ ಟೋಲ್ ಗೇಟ್ ಜೊತೆಗೆ ಹೊಸದೊಂದು ಟೋಲ್ ಗೇಟ್ ಸುಲಿಗೆ ಪ್ರಾರಂಭಿಸಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನೂ ನೀಡದೆ ಈಗ ವಳಾಲಿನಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದಾರೆ. ಇದು ಕೇಂದ್ರ ಸರಕಾರದ ಸರ್ವಾಧಿಕಾರ ಆಡಳಿತದ ಪರಮಾವಧಿಯಾಗಿದೆ ಎಂದವರು ಟೀಕಿಸಿದರು. ಈಗಾಗಲೇ ದೂರುಗಳು ಬರುತ್ತಿದ್ದು, ಕಾರುಗಳ ಏಕಮುಖ ಪ್ರಯಾಣಕ್ಕೂ 140 ರೂಪಾಯಿ, ಲಾರಿಗಳಿಗೆ 465 ರೂ. ವಸೂಲು ಮಾಡಲಾಗುತ್ತಿದೆ.
ಇದೆಂತಹಾ ಲೂಟಿಕೋರ ಸರಕಾರ ? ಕೇಂದ್ರ ಸರಕಾರ ಹಣ‌ ಲೂಟಿ ಮಾಡಲೆಂದೇ ರಾಷ್ಡ್ರೀಯ‌ಹೆದ್ದಾರಿ ಮಾಡುತ್ತಿರುವುದೇ ಎಂಬ ಅನುಮಾನ ಬರುತ್ತಿದೆ.
ಕೇಂದ್ರದಲ್ಲಿ ಸರಕಾರ ನಡೆಸುತ್ತಿರುವುದು ಬಿಜೆಪಿ ಪಕ್ಷ. ತುಳುನಾಡಿನ ಜನತೆ 1990 ರಿಂದ ಸತತವಾಗಿ ಬಿಜೆಪಿಗೆ ಓಟು ಹಾಕುತ್ತಿದ್ದಾರೆ, ಗೆಲ್ಲಿಸುತ್ತಿದ್ದಾರೆ. ಆದ್ದರಿಂದ ಇದನ್ನು ರದ್ದು ಮಾಡಿಸುವುದು, ನ್ಯಾಯ ಕೊಡಿಸುವುದು ಬಿಜೆಪಿ ಸಂಸದರ ಮುಖ್ಯ ಹೊಣೆಯಾಗಿದೆ. ಬ್ರಹ್ಮರ ಕೂಟ್ಲು ಟೋಲ್ ಗೇಟ್ ತಕ್ಷಣದಿಂದಲೇ ರದ್ದಾಗಬೇಕು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ತಿ ಮಾಡದೆ ವಳಾಲು ಟೋಲ್ ಕಾರ್ಯಾರಂಭ ಮಾಡಲೇಬಾರದು ಎಂದು ಜನರು ಬೇಡಿಕೆ ಇಡುತ್ತಿರುವಾಗಲೇ ಜನರ ನೋವಿಗೆ ಕಿಂಚಿತ್ತೂ ಸ್ಪಂದಿಸದೆ ಹೊಸ ಟೋಲ್ ಗೇಟ್ ಪ್ರಾರಂಭಿಸಿದ್ದೂ ಅಲ್ಲದೆ, ದುಬಾರಿ ದರವನ್ನೂ ವಸೂಲು ಮಾಡಲಾಗುತ್ತಿದ್ದು, ಇದು ಖಂಡನೀಯ, ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಗಮನ‌ಕೊಡದಿದ್ದರೆ ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ವಳಾಲಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದವರು ಕೇಂದ್ರ ಸರಕಾರವನ್ನು ಎಚ್ಚರಿಸಿದರು. ಸಂಸದರಾದ ಬೃಜೇಶ್ ಚೌಟ ತಕ್ಷಣ ಮದ್ಯಪ್ರವೇಶ ಮಾಡಿ ನ್ಯಾಯ ಒದಗಿಸಬೇಕಾದ ತನ್ನ ಕರ್ತವ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here